ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, November 12, 2013

ಮಧ್ಯರಾತ್ರೀಲಿ ರುಂಡ ಇಲ್ಲದ ಸರದಾರ ಕುದುರೆ ಏರಿ ಹೋಗ್ತಾನೆ!

ಚಿತ್ರಕೃಪೆ: ಅಂತರ್ಜಾಲ
ಮಧ್ಯರಾತ್ರೀಲಿ ರುಂಡ ಇಲ್ಲದ ಸರದಾರ ಕುದುರೆ ಏರಿ ಹೋಗ್ತಾನೆ! 


ಕುಮಟಾದಲ್ಲಿ ನಾನಿದ್ದ ಒಂದೆರಡು ವರ್ಷಗಳಲ್ಲಿ ಶಾನಭಾಗ ಮಾಮ ಮತ್ತು ನಾನು ಬಹಳ ಸ್ನೇಹಿತರಾಗಿದ್ದೆವು. ಅವರಿಗೆ ಎಂಬತ್ತಕ್ಕೆ ಹತ್ತಿರ; ನನಗೆ ಇಪ್ಪತ್ತಕ್ಕಿನ್ನೂ ಐದಾರು ದೂರ. ವಯಸ್ಸಿನ ಅಂತರ ಕಟ್ಕೊಂಡು ನಮ್ಗೇನಾಗಬೇಕು? ನಮ್ಮ ನಡುವೆ ಅಜ್ಜ-ಮೊಮ್ಮಗನಲ್ಲಿರುವಂಥ ಅಪ್ಪಟ ಪ್ರೀತಿ. ನನಗೆ ಕೊಂಕಣಿ ಮಾತನಾಡಲು ಬರ್ತಿರಲಿಲ್ಲ, ಅವರಿಗೆ ಕನ್ನಡದ ಕೆಲವು ಪದಗಳಿಗೆ ಕೊರತೆಯಾಗುತ್ತಿತ್ತು. ಆದರೂ ನಮ್ಮ ನಡುವೆ ಒಂದೇ ಒಂದು ದಿನ ಮಿಸ್ ಅಂಡರ್ಸ್ಟ್ಯಾಂಡಿಂಗ್ ಇರಲೇ ಇಲ್ಲ. ನೀವು ನಂಬೋದಾದ್ರೆ ನಂಬಿ ಬಿಟ್ರೆ ಬಿಡಿ; ಅದರಿಂದ ನನಗೇನೂ ನಷ್ಟವಿಲ್ಲ. ಪದಗಳನ್ನು ವಾಕ್ಯಗಳ ಚಹರೆಯಿಂದಲೂ ಅರ್ಥಮಾಡಿಕೊಳ್ಳಬಹುದು ಎಂಬುದು ಅರ್ಥವಾಗಿದ್ದೇ ನನಗೆ ಆ ಸಮಯದಲ್ಲಿ. "ವಿ ಕ್ಯಾನ್ ಅಂಡರ್ಸ್ಟ್ಯಾಂಡ್  ಬೈ  ವರ್ಚ್ಯೂ ಆಫ್ ಇಟ್ಸ್ ಇಮೋಶನ್" ಕೆಲವೊಮ್ಮೆ ಅವರ ಮನೆಯ ಅಡಿಗೆಯ ಪದಾರ್ಥಗಳನ್ನು ನನಗೆ ಕೊಡುತ್ತಿದ್ದರು; ಇನ್ನು ಕೆಲವೊಮ್ಮೆ ನಾನು ಕೊಡುವುದನ್ನು ಅವರು ಸ್ವೀಕರಿಸುತ್ತಿದ್ದರು. ಹೀಗೇ ಅವರ ನಮ್ಮ ಒಡನಾಟದ ವಿಶಿಷ್ಟ ಮತ್ತು ನಮ್ಮದೇ ಆದ ರೀತಿಯಲ್ಲಿ ಅಮೋಘವಾಗಿತ್ತು.

ನಾನು ಎಲ್ಲಿಗೇ ಹೋದರೂ ಅರೆನಿಮಿಷವೂ ಸುಮ್ಮನಿರುವ ಪೈಕಿ ಅಲ್ಲ ಎಂಬುದು ನಿಮಗೂ ಗೊತ್ತಾಗಿರಲು ಸಾಕು. ನಾಪಿತನ ಅಂಗಡಿಗೆ ಹೋಗಿ ಸರದಿಯಲ್ಲಿ ಕಾಯುತ್ತ ಕೂತಾಗ ಸಿಗುವ ಹಳೆಯ ಪೇಪರು, ಪತ್ರಿಕೆ ಏನೇ ಸಿಕ್ಕರೂ ಸಹ ಅದನ್ನೇ ಹೊಸದರಂತೆ ಆಸೆಪಟ್ಟುಕೊಂಡು ಓದುತ್ತಿದ್ದೆ. ನಾಪಿತನ ಅಂಗಡಿಗೆ ಬರುವ ಗಿರಾಕಿಗಳಲ್ಲಿ ಕೆಲವರು ಬಹಳ ಮಜಮಜಾ ಕಥೆಗಳನ್ನು ಹೊತ್ತು ತರುತ್ತಾರೆ! ಒಬ್ಬೊಬ್ಬರ ನಿರೂಪಣೆಯೂ ವಿಶಿಷ್ಟ ಮತ್ತು ವಿಭಿನ್ನ. ಅವರಿಗೆ ಅವರೇ ಸಾಟಿ! ಎಲ್ಲರ ಮಧ್ಯೆದಲ್ಲಿ ಬಾಯಿ ತೂರಿಸದೇ ಸುಮ್ಮನೆ ಕುಳಿತು ಅವರೆಲ್ಲ ಹೇಳುವುದನ್ನು ಕೇಳುವ ಜಾಯಮಾನ ನನ್ನದಾಗಿತ್ತು. ಕಥೆಗಳಲ್ಲಿ ಅದಲ್ಲ ಇದಲ್ಲ ಎಂಬುದಿಲ್ಲ, ಮುಖ್ಯಮಂತ್ರಿ ಸೀಟು ಅಲ್ಲಾಡುತ್ತಿರುವ ಸುದ್ದಿಯಿಂದ ಹಿಡಿದು ಮೇಲಿನ ಮನೆ ಮಾದೇವಕ್ಕನ ಮಗಳು ಓಡಿಹೋದ ಸುದ್ದಿಯವರೆಗೆ ಎಲ್ಲವೂ ಅಲ್ಲಿ ಲಭ್ಯ ಗೊತ್ತೇ? ನಾಪಿತನ ಕೆಮ್ಮು, ತುಪುಕ್ಕನೆ ಉಗುಳುವಿಕೆ ಇವೆಲ್ಲ ನಡುನಡುವೆ ಬರುವ ಛದ್ಮವೇಷಗಳಂತೆ ಇರುತ್ತಿದ್ದವು. ಒಳಕಲ್ಲಿನಲ್ಲಿ ರುಬ್ಬುವಾಗ ಕೈಯ್ಯಿಂದ ಹಿಟ್ಟನ್ನು ಮಗುಚಿ ಮಗುಚಿ ಮುಂದೆಹಾಕಿದಂತೇ ನಾಪಿತನ ಹೂಂ...ಗುಟ್ಟುವಿಕೆ ಕಥೆಗಾರರಿಗೆ ಉತ್ತೇಜನ ನೀಡುತ್ತಿತ್ತು. ಅಲ್ಲಿಗೆ ಬರುವ ಕಥೆಗಾರರಂತಹ ನಿಸ್ಸೀಮ ಕಥೆಗಾರರನ್ನು ನಾನು ಜಗದಲ್ಲಿ ಬೇರಾವ ಜಾಗದಲ್ಲೂ ಕಾಣಲೇ ಇಲ್ಲ! ಅವರಿಗೆಲ್ಲ ಯಾವ ಪ್ರಶಸ್ತಿ ನೀಡಿದರೂ ಸಾಲದು. ನಿಜ ಹೇಳ್ತೇನೆ ಕೇಳಿ: ನಾಪಿತ ನನ್ನನ್ನು ಬೇಗ ಮನೆಗೆ ಕಳಿಸಿಬಿಟ್ಟರೆ ಬೇಜಾರು; ನನಗೆ ಇನ್ನೂ ಇರುತ್ತಿದ್ದುದು ಕಥೆಯ ಹಸಿವು. ಇವತ್ತಿಗೂ ನಾಪಿತರ ಅಂಗಡಿ ನನಗೆ ಪ್ರೀತಿ ಯಾಕೆಂಬುದರ ಗುಟ್ಟು ನನಗಷ್ಟೇ ಗೊತ್ತು ಹೋಯ್, ಯಾರಲ್ಲೂ ಹೇಳ್ ಬೇಡಿ ಮಾರಾಯ್ರೆ.   

ಕಷ್ಟಪಟ್ಟು ಮೀನುಗಾರರೆಲ್ಲಾ ಸೇರಿ, ಬಸವರಾಜದುರ್ಗಕ್ಕೆ ಹೋಗಿ. ಅಲ್ಲಿರುವ ಜಟ್ಟುಗನಿಗೆ ಬಲಿಪೂಜೆ ಕೊಡದಿದ್ದರೆ ಅವರಿಗೆ ಜಾಸ್ತಿ ಮೀನು ಸಿಗುವುದಿಲ್ಲವಂತೆ. ಸಂಸಾರದ ತಾಪತ್ರಯ ತಪ್ಪುವುದಿಲ್ಲವಂತೆ. ಪೂಜೆ ಮಾಡುವಾಗ ಅಲ್ಲಿರುವ ಪೂಜಾರಿಯ ಕಾಲಿಗೆ ಗೆಜ್ಜೆಕಟ್ಟುತ್ತಾರಂತೆ. ಪೂಜಾರಿ ಮೈಮೇಲೆ ಜಟ್ಟುಗನ ಆವೇಶವಾದಾಗ ಪೂಜಾರಿ ಥಕಥಕನೆ ಕುಣಿಯುತ್ತಾನಂತೆ. ಆವ ಕುಣಿಯುವ ಹೊತ್ತಿಗೆ ಕಟ್ಟಿದ ದೊಡ್ಡಗೆಜ್ಜೆಯ ಸಪ್ಪಳ ಗೈಲ್ ಗೈಲ್ ಗೈಲ್ ಗೈಲ್ ಎನ್ನುವಾಗ ಸೇರಿದವರ ಎದೆಯಲ್ಲೆಲ್ಲ ಗಡಗಡಗಡ ನಡುಕ ಗೊತ್ತಾ? ಬಂದ ಭಕ್ತರ ಕೋಳಿಯನ್ನೆಲ್ಲ ಒಂದೊಂದಾಗಿ ಇಸಿದುಕೊಂಡು ಬಲಿಹಾಕಿದ ನಂತರ ಜಟ್ಟುಗ ಶಾಂತವಾಗುತ್ತಾನಂತೆ. ಅಲ್ಲಿಯವರೆಗೂ ಯಾರೂ ಪಿಟ್ಟಂತ ಮಾತನಾಡೂದಿಲ್ಲ ಗೊತ್ತಾ? ಅಲ್ಲೇನಿದ್ರೂ ಕೆಂಪು ಕುಂಕುಮ-ಅಡಕೆಮರದ ಶಿಂಗಾರ, ಸೇವಂತಿಗೆ ಹೂವು ಇವುಗಳ ರಾಶಿರಾಶಿ. ಇನ್ನೊಂದ್ ಪಕ್ಕದಲ್ಲಿ ತೆಂಗಿನಕಾಯಿಗಳ ರಾಶಿರಾಶಿ. ಜಟ್ಟುಗನ ಕಲ್ಲಿಗೆ ಕೊಡದ ನೀರು ಹಾಕಿ ಅಭಿಷೇಕಮಾಡಿ, ರಾಶಿ ರಾಶಿ ಕುಂಕುಮ ಚೆಲ್ಲಿ, ಊರಿಂದ ಕಟ್ಕೊಂಡುಬಂದ ಅಕ್ಷತೆಕಾಳುಗಳನ್ನೆಲ್ಲಾ ಹಾಕಿ, ಮೇಲಿಂದ ಬಿಳಿಯ ಶಿಂಗಾರ ಇಟ್ಟು, ಸೇವಂತಿಗೆ ಮಾಲೆಯಲ್ಲಿ ಅಲಂಕರಿಸಿದಾಗ ಜಟ್ಟುಗನಿಗೆ ಬಹಳ ಖುಷಿಯಂತೆ.

"ನಿಮ್ಗೆ ದುರ್ಗಾಕೇರಿ ದಾಮೋದರ ಗೊತ್ತದ್ಯಾ? ಕಳದೊರ್ಸ ಅಂವ ಪೂಜಿ ಕೊಡ್ಲಿಲ್ಲಾಗಿದ. ಏನಿಲ್ಲ, ತಾಪಡ್ತೋಪು ಸುರುವಾಯ್ತು ಜರ. ಎಲ್ಲೆಲ್ಲೆಲ್ಲಾ ತಿರಗಾಡ್ದ. ಯಾವ ಡಾಕ್ಟ್ರ ತಾವನೂ ಗುಣಾ ಆಗ್ಲಿಲ್ಲ. ಬರುವರ್ಸ್ದಗೆ ಎರಡೆರಡು ಕೋಳಿ ಕೊಡ್ತೆ ಹೇಳಿ ಹೇಳ್ಕಂಡ ನೋಡಿ. ಜರ ಪಟ್ನೆ ಇಳದೋಯ್ತು. ದೇವಪ್ಪ ಅವನ್ಯಲ್ರೀ ಇವರೆ[ನಾಪಿತನನ್ನುದ್ದೇಶಿಸಿ ಹೇಳಿದ್ದು] ಅಂವಗೂ ಅಷ್ಟೇವ, ಹೊಟ್ಟೀಲೆಲ್ಲಾ ಒಂಥರಾ ಆಯ್ತದೆ, ಜೀವ್ದಗೆಲ್ಲ ಹುಷಾರಿಲ್ಲ ಅಂದಾಯ್ತ ಇಲ್ವ, ಕೂಡ್ಲೇ ಜಟ್ಗಂಗೆ ಕೋಳಿ ಹರಕೆ ಹೇಳ್ಕಂಡ, ಮಾರನೇ ದಿನವೇ ಎಲ್ಲಾ ಆರಾಮು ಗೊತ್ತದ್ಯಾ? ಜಟ್ಗನ ಶಕ್ತಿ ಎಂತ ಕಮ್ಮೀ ಹೇಳಿ ಮಾಡಿರಾ? ಕುಂತಲ್ಲೆ ಜಟ್ಗ ಎಲ್ಲಾ ಲೆಕ್ಕ ಹಾಕ್ತದೆ."  ಇಂಥಾ ಹೇಳಿಕೆಗಳು, ಅವರಲ್ಲಿನ ಸಂಭಾಷಣೆಗಳನ್ನು ಕೇಳುತ್ತಿದ್ದಂತೆ ನನಗೆ ಮನದಲ್ಲಿ ಪೂಜಾರಿಯ ಗೆಜ್ಜೆಯ ಸಪ್ಪಳ ಮತ್ತು ಕತ್ತುಕುಯ್ಸಿಕೊಂಡು ಸಾಯುವಾಗ ಹಾರಾಡಬಹುದಾದ ಕೋಳಿಗಳ ಚಿತ್ರಣವೇ ಮನದಲ್ಲಿ ತುಂಬಿರುತ್ತಿತ್ತು. ಪ್ರಾಯಶಃ ಆ ಪೊಜೆಯ ದಿನ ಬಸವರಾಜದುರ್ಗದ ಆ ಪ್ರಾಂತವೆಲ್ಲಾ ರಕ್ತಮಯವೋ ಏನೋ ಎಂದೆನಿಸುತ್ತಿತ್ತು. ಅಂತಹ ಕಥೆಗಳನ್ನು ಕೇಳಿದ್ದ ರಾತ್ರಿ ಸ್ವಪ್ನದಲ್ಲಿ ಅಂಥಾದ್ದೇ ಮೇಲಾಟ ಕಾಣುತ್ತಿತ್ತು. ಕನಸಿನಲ್ಲೂ ಮತ್ತದೇ ದೃಶ್ಯಾವಳಿ: ಪೂಜಾರಿ ಥಕಥಕನೆ ಕುಣಿಯುತ್ತಿರುವುದು, ಅವನ ಕಾಲಿಗೆ ಕಟ್ಟಿದ ಗೆಜ್ಜೆ ಗೈಲ್ ಗೈಲ್ ಗೈಲ್ ಗೈಲ್, ಎಲ್ಲಿ ನೋಡಿದರೂ ಕೆಂಪುರಕ್ತ, ಕೆಂಪುಬಣ್ಣ!     

ಶಾನಭಾಗಮಾಮನ ಕಥೆಗಳು ಅಂತಹ ಕಥೆಗಳಿಗೆ ಭಿನ್ನಾವಾಗೇನೂ ಇರಲಿಲ್ಲ. ಆದರೆ ಹೇಳುವ ಶೈಲಿ ಬೇರೆ. ಕುವೆಂಪುವಿಗೆ ಕಥೆಗಾರ ಮಂಜಣ್ಣ ಸಿಕ್ಕಿದ್ದಂತೇ ನನಗೂ ಶಾನಭಾಗ ಮಾಮ ಸಿಕ್ಕಿದ್ದಕ್ಕೆ ಒಂಥರಾ ಖುಷಿಯಿತ್ತು. ಶಾನಭಾಗಮಾಮನದ್ದೂ ಬಾಡಿಗೆ ಮನೆ, ನನ್ನದೂ ಕೂಡ. ನಾನು ನನ್ನ ಚಿಕ್ಕಪ್ಪನ ಮನೆಯಲ್ಲಿದ್ದೆ-ಬಾಡಿಗೆ ಅವರು ಕೊಡುತ್ತಿದ್ದರಷ್ಟೆ. ಶಾನಭಾಗಮಾಮನಿಗೆ ಮೈತುಂಬ ಬಡತನ; ಆದರೆ ಆತ ಬಹಳ ಬುದ್ಧಿವಂತ. ಪೋಸ್ಟಾಫೀಸಿನಲ್ಲಿ ಕೆಲಸಮಾಡುತ್ತಿದ್ದ ಶಾನಭಾಗಮಾಮನಿಗೆ ನಿವೃತ್ತಿಯಾಗಿ ದಶಕಗಳೇ ಕಳೆದಿದ್ದರೂ ಇನ್ನೂ ಪೋಸ್ಟ್ ಮಾಸ್ತರಿಕೆಯ ಹುದ್ದೆಯಲ್ಲಿರುವ ಗತ್ತು ಕಾಣುತ್ತಿತ್ತು! ತೆಳ್ಳಗಿನ ಕಡ್ಡಿ ಶರೀರದಲ್ಲಿ ಅರ್ಧಲೀಟರ್ ರಕ್ತ ಸಹ ಇದೆಯೋ ಇಲ್ಲವೋ, ಆದರೆ ಭಯಂಕರ ಸ್ವಾವಲಂಬಿ. ಯಾರನ್ನೂ ಅವಲಂಬಿಸಿ ಬದುಕುವ ಜಾತಿಯ ಪ್ರಾಣಿಯೇ ಅಲ್ಲ ಅದು!  ಜೊತೆಗೆ ಅದೇ ರೀತಿಯ ಲಕ್ಷಣದ, ಕಡ್ಡಿಗಾತ್ರದ ಹೆಂಡತಿ, ಮಗ. ಈ ಮೂರುಜನರುಳ್ಳ ಸಂಸಾರ.

ಮಗ ಯಾವುದೋ ವೈದ್ಯರ ಕ್ಲಿನಿಕ್ಕಿನಲ್ಲಿ ಕಾಂಪೌಂಡರ್ ಆಗಿ ಕೆಲಸಮಾಡುತ್ತಿದ್ದ. ಅಪ್ಪನಿಂದ ಅನುವಂಶೀಯವಾಗಿ ಪಡೆಕೊಂಡ ಬಹುದೊಡ್ಡ ಆಸ್ತಿಯೆಂದರೆ ಆಸ್ತಮಾ! ಮಳೆ-ಚಳಿಗಾಲದಲ್ಲಿ ನಿತ್ಯವೂ ಬೆಳಿಗ್ಗೆ ಅಪ್ಪ-ಮಗ ಇನ್ನೂ ಇದ್ದಾರೋ ಹೋಗಿಬಿಟ್ಟರೋ ಎಂಬಷ್ಟು ತ್ರಾಸು. ಏನುಮಾಡೋಣ? ಸಹಿಸಲೇ ಬೇಕಲ್ಲಾ? ಶಾನುಭಾಗ ಮಾಮನಿಗೆ ಬರುತ್ತಿದ್ದ ಪಿಂಚಣಿ ಎಂಟುನೂರೋ ಒಂಬೈನೂರೋ, ಅಷ್ಟೇ. ಮಗನಿಗೆ ಸಿಗುತ್ತಿದ್ದ ಸಂಬಳ ಒಂದೆರಡು ಸಾವಿರ ಇದ್ದಿತ್ತೋ ಏನೋ. ಅಷ್ಟರಲ್ಲೇ ಮೂವರ ಹೊಟ್ಟೆ-ಬಟ್ಟೆ-ಔಷಧ ಎಲ್ಲಾದಕ್ಕೂ ಆಗಬೇಕಿತ್ತು. ನನಗೆ ಅವರನ್ನೆಲ್ಲ ಕಂಡರೆ ಬಹಳ ನೋವೂ ಆಗುತ್ತಿತ್ತು. ಕೇವಲ ದುಡಿದದ್ದು ಮಾತ್ರ ನಮ್ಮದೇ? ದುಡಿಯುವ ದೈಹಿಕ ಆರೋಗ್ಯ, ಆಯುಷ್ಯ, ಅವಕಾಶ ಎಲ್ಲವನ್ನೂ ಜಗನ್ನಿಯಾಮಕ ಕೊಡಬೇಕಲ್ಲವೇ? ಬೇಸಿಗೆ-ಮಳೆ-ಚಳಿ ಮೂರೂ ಕಾಲಗಳಲ್ಲೂ ಶಾನಭಾಗ ಮಾಮನ ಮಗ ಹೊರಗೆ ಹೋಗುವಾಗ ಛತ್ರಿಯೊಂದು ಇದ್ದೇ ಇರುತ್ತಿತ್ತು; ಬಿಸಿಲಿಗೆ ಅದರ ಕಪ್ಪುಬಣ್ಣವೆಲ್ಲ ತಿರುಗಿ ಬಿಳಿಯ ಬಣ್ಣಕ್ಕೇ ತೀರಾ ಹತ್ತಿರವೆಂಬಷ್ಟು ಆಗಿಬಿಟ್ಟಿತ್ತು. ತಿಪ್ಪಾಭಟ್ಟರ ಕೊಡೆಯಂತೇ ಮಳೆಬಂದರೆ ನೀರೆಲ್ಲಾ ಒಳಗೋ ಹೊರಗೋ ಗೊತ್ತಿಲ್ಲ. ಕವಿಯೊಬ್ಬರು ಬಡತನವನ್ನೇ ಸುಖಿಸಿದ್ದನ್ನು ನೋಡಿ:

ತಿಪ್ಪಾ ಭಟ್ಟರ ಚಂದ ಕೊಡೆ
ಸಾವಿರ ತೂತುಗಳಿಂದ ಕೊಡೆ
ಮಳೆ ನೀರೆಲ್ಲಾ ಒಳಗಡೆಗೆ
ಭಟ್ಟರು ಮಿಂದರು ಕೊಡೆಯೊಳಗೆ

ಎಂದು ಕವಿ ಹೇಳಿದ ಹಾಗೇ ಶಾನಭಾಗ ಮಾಮನ ಮಗನಲ್ಲಿರುವ ಕೊಡೆ ಸಹ ಅದೇ ರೀತಿಯದೇ ಆಗಿತ್ತೋ ಏನೋ, ಬಿಡಿಸಿ ಹಿಡಿದಾಗ ಅದರ ಅಂದವನ್ನು ನಾನು ನೋಡಲಾಗಿರಲಿಲ್ಲ, ಸಾರಿ. ಕಣ್ಣಿಗೊಂದು ಎಂಟಾಣೆ ಗಾಜಿನ ಸೋಡಾಬುಡ್ಡಿಯನ್ನು ಏರಿಸಿಕೊಂಡು ನಿತ್ಯವೂ ಎರಡೂ ಹೊತ್ತು ಕ್ಲಿನಿಕ್ಕಿಗೆ ಹೋಗಿಬರಬೇಕಾಗಿತ್ತು. ಬಹುಶಃ ಕಣ್ಣಿನ ನರದೌರ್ಬಲ್ಯ ಸಹ ಅನುವಂಶೀಯವಾಗಿಯೇ ಪ್ರಾಪ್ರವಾಗಿತ್ತೋ ಏನೋ. ಆದರೆ ಶಾನಭಾಗ ಮಾಮ ಅಷ್ಟು ದಪ್ಪದ ಸೋಡಾಬುಡ್ಡಿ ಬಳಸಿದ್ದನ್ನು ನಾನೆಂದೂ ನೋಡಿಲ್ಲ. ಅವರದೇನಿದ್ದರೂ ಗಾಂಧಿ ಕನ್ನಡಕ. ಬಡತನವಿದ್ದ ಕಾರಣಕ್ಕೋ ಏನೋ-ಗಾಂಧೀಜಿಯಂತೆಯೇ ಸರಳ ಜೀವನ.

ಇಂಥಾ ಶಾನಭಾಗ ಮಾಮನ ಮಗ ಮಳೆಗಾಲದಲ್ಲಿ ಒಂದು ದಿನ ಬರುವುದನ್ನು ದೂರದಿಂದ ನೋಡುತ್ತಿದ್ದೆ. ನಾವಿದ್ದ ಆ ಬಾಡಿಗೆಮನೆ ಎಕರೆಯಷ್ಟು ಖುಲ್ಲಾ ಜಾಗವನ್ನು ಹೊರಾವರಣದಲ್ಲಿ ಹೊಂದಿತ್ತು. ಸುತ್ತ ಕಲಿನ ಪಾಗಾರ. ಎರಡು ಪ್ರತ್ಯೇಕ ಮನೆಗಳು. ಮುಂದುಗಡೆ ಒಂದು ದಣಪೆ[ದಾಟಲು ಇರುವ ಜಾಗ]. ಹೇಳಿದೆನಲ್ಲಾ ಮಳೆಗಾಲದ ಒಂದು ದಿನ ಆತ ದಣಪೆಯ ಹತ್ತಿರ ನಿಂತಿರುವುದನ್ನು ನೋಡಿದೆ. ಕೆಲಸ ಮುಗಿಸಿ ಮನೆಗೆ ಬಂದಿರಬೇಕೆಂದು ಸುಮ್ಮನಾದೆ. ನನ್ನ ಕೆಲಸಕ್ಕೆ ತೆರಳಿದೆ. ಕಾಲುಗಂಟೆ ಬಿಟ್ಟು ಯಾಕೋ ಮತ್ತೊಮ್ಮೆ ಹೊರಗೆ ಬಂದು ನೋಡಿದರೆ ಆತ ಅಲ್ಲೇ ನಿಂತಿದ್ದ. ಏನೋ ಸಹಾಯವನ್ನು ನಿರೀಕ್ಷಿಸುವ ಹಾಗಿತ್ತು. ಆದರೆ ಆತನ ಕಣ್ಣು ನನಗೆ ಕಾಣುತ್ತಿರಲಿಲ್ಲ. ಸೋಡಾಬುಡ್ಡಿಯಲ್ಲಿ ಆತನಿಗೆ ನಾನು ಕಾಣುತ್ತಿದ್ದೆ. "ಉಂ ಬೆಬ್ಬೋ ಬೆಬ್ಬೋ ಬೆಬ್ಬೋ" ಎಂದು ಕೂಗುತ್ತಿದ್ದ. ನನಗೆ ಕೊಂಕಣಿಯ ಆ ಪದದ ಅರ್ಥ ಗೊತ್ತಿರಲಿಲ್ಲ. ಯಾವುದೋ ನಾಯಿಯಿರಬೇಕು-ಬೌ ಬೌ ಇದೆಯೆನ್ನುತ್ತಿದ್ದಾನೇನೋ  ಅಂದುಕೊಂಡೆ; ಕ್ಷಣಕಾಲ ಮತ್ತೂ ಹಾಗೆ ನೋಡುತ್ತಲೇ ಇದ್ದೆ. ಯಾವ ನಾಯಿಯ ಸುಳಿವೂ ಅಲ್ಲಿರಲಿಲ್ಲ. ಹೋಗಿ ನೋಡಿದೆ: ದಣಪೆಯ ಮಧ್ಯಭಾದಲ್ಲೊಂದು ದೊಡ್ಡ ಕಪ್ಪೆ ಕುಳಿತುಬಿಟ್ಟಿತ್ತು. [ಕೊಂಕಣಿಯಲ್ಲಿ ಕಪ್ಪೆಗೆ ’ಬೆಬ್ಬೋ’ ಎನ್ನುತ್ತಾರೆ ಎಂಬುದು ಆಗಲೇ ಗೊತ್ತಾಗಿದ್ದು.]ಬೆಬ್ಬೋವನ್ನು ಕಂಡವನೇ ಬೊಬ್ಬೆ ಹೊಡೆಯಲು ಆರಂಭಿಸಿಬಿಟ್ಟಿದ್ದ! ಅಕಸ್ಮಾತ್ ಬೆಬ್ಬೋವನ್ನು ಕೆಣಕಿ ಸರಕ್ಕನೆ ಅದು ಮೈಮೇಲೆ ಹಾರಿಬಿಟ್ಟರೆ!ಯಾರಿಗೆ ಬೇಕು ಫಜೀತಿ ಎಂಬುದು ಆತನ ಅನಿಸಿಕೆ. ನಾನು ಹೋಗಿ, ಆತನನ್ನು ಪಕ್ಕಕ್ಕೆ ಸರಿಸಿ, ಕಾಲು ಬಡಿದು ಕಪ್ಪೆಯನ್ನು ಹಾರಿಸದಿದ್ದರೆ ಆ ದಿನ ಅದೆಷ್ಟು ಹೊತ್ತು ಅಲ್ಲೇ ನಿಂತಿರುತ್ತಿದ್ದನೋ ಪುಣ್ಯಾತ್ಮ! ಯಾಕೆಂದರೆ ಆ ದಿನ ಶಾನಭಾಗ ಮಾಮ ಮನೆಯಲ್ಲಿರಲಿಲ್ಲ, ಹೊರಗೆಲ್ಲೋ ಹೋಗಿದ್ದ. ಕೆಲವು ಜನರಲ್ಲಿ ಎಷ್ಟು ಅಧೈರ್ಯ ನೋಡಿ. ಲೋಕದ ಜನಜೀವನೇ ಹಾಗೆ; ಒಂದಿದ್ದರೆ ಒಂದಿರುವುದಿಲ್ಲ. ಆದರೆ ಶಾನಭಾಗಮಾಮನ ಮನೆಯಲ್ಲಿ ಎರಡೂ ಇರಲಿಲ್ಲ-ಸಿರಿವಂತಿಕೆಯೂ ಇರಲಿಲ್ಲ, ಆರೋಗ್ಯವಂತ, ಸದೃಢ ಮಕ್ಕಳೂ ಇರಲಿಲ್ಲ.

ಜನನೀಂ ಜನ್ಮಸೌಖ್ಯಾನಾಂ ವರ್ಧಿನೀ ಕುಲಸಂಪದಾಂ |
ಪದವೀಂ ಪೂರ್ವ ಪುಣ್ಯಾನಾಂ ಲಿಖ್ಯತೇ ಜನ್ಮಪತ್ರಿಕಾ ||

ಪಡೆದು ಬಂದಿದ್ದನ್ನು ಮನುಷ್ಯ ಅನುಭವಿಸಲೇ ಬೇಕೆಂಬುದನ್ನು ನಾನು ಹೇಳಲು ಆರಂಭಿಸಿದ್ದು ಆ ಕಾಲದಿಂದಲೇ. ಲೋಕದ ವ್ಯಾವಹಾರಿಕ ಜಂಜಾಟಗಳು, ಇಲ್ಲಿನ ಬದುಕಿನ ಬಿಸಿ ನನಗೆ ತಟ್ಟಲಾರಂಭಿಸಿದ್ದು ಅದೇ ಸಮಯದಿಂದಲೇ. ಲೋಕ ನಾವೆಣಿಸಿದ ರೀತಿಯಲ್ಲಿ ಇರುವುದಿಲ್ಲ ಎಂಬ ಅರಿವುಂಟಾಗಿದ್ದು ಸಹ ಅಂದಿನಿಂದಲೇ. ನನ್ನಲ್ಲಿ ಹೇರಳ ಹಣವಿದ್ದರೆ ಒಂದಷ್ಟನ್ನು ಶಾನಭಾಗ ಮಾಮನಿಗೆ ಕೊಡಬಹುದಿತ್ತು; ಯಾಕೆಂದರೆ ಅವರು ಅಷ್ಟು ಒಳ್ಳೆಯವರು, ಅಷ್ಟು ಸಂಭಾವಿತರು, ಅಷ್ಟು ಸುಸಂಸ್ಕೃತರು, ಅಷ್ಟು ನಿಸ್ಪೃಹರು. ಔಷಧಕ್ಕೆ ಖರ್ಚಿಗಿಲ್ಲದೇ ಕೆಲವು ದಿನಗಳನ್ನು ಕಳೆದರೇನೋ ಎಂಬಂತಹ ಭಾವನೆಗಳೆಲ್ಲಾ ನನ್ನಲ್ಲಿ ಕೆರಳಿದಾಗ, ಅವರಲ್ಲಿ ನಾನು ಕೇಳಿದ್ದೂ ಇದೆ; ಆದರೆ ಆಗಲೇ ಹೇಳಿದೆನಲ್ಲಾ...ಭಯಂಕರ ಸ್ವಾಭಿಮಾನಿ; ಔಷಧವಿಲ್ಲದೇ ಸತ್ತರೂ ಬೇಜಾರಿಲ್ಲ ಇನ್ನೊಬ್ಬರಿಂದ ಪಡೆಯಬಾರದೆಂಬ ಮನೋಧರ್ಮ. 

ಇಷ್ಟೆಲ್ಲ ಕಷ್ಟಗಳ ನಡುವೆಯೂ ಜಾತೀಬಾಂಧವರು ನಮ್ಮ ಶಾನಭಾಗಮಾಮನಿಗೆ ಯಾವ ಸಹಾಯವನ್ನೂ ಮಾಡುತ್ತಿರಲಿಲ್ಲ ಬಿಡಿ. ಜಾತಿಗೀತಿ ಎಲ್ಲ ಒಂಥಾರಾ ಹಾಗೇನೆ. ಅದೆಲ್ಲಾ ಇರಬೇಕೋ ಇರಬೇಕು-ಅದನ್ನೇ ನೆಚ್ಚಿಕೊಂಡು ಕುಳಿತರೆ ಯಾವ ಕೆಲಸವೂ ಸಾಧ್ಯವಾಗದು. ನನ್ನ ಜೀವನಾನುಭವದಲ್ಲಿ ಇದುವರೆಗೆ ನಾನು ಅದೆಷ್ಟೋ ಸಾವಿರ ಜನರೊಡನೆ ಒಡನಾಡಿದ್ದೇನೆ. ಜಾತಿಯ ಪ್ರಶ್ನೆಯೇ ಇಲ್ಲ. ಉತ್ತಮರು-ಮಧ್ಯಮರು-ಅಧಮರು ಎಂಬುದು ಸ್ವಭಾವದಿಂದ ಗೊತ್ತಾಗುತ್ತದೆ-ಅದೇ ನಿಜವಾದ ಪ್ರಮಾಣ. ಎಲ್ಲಾ ಜಾತಿಗಳಲ್ಲೂ ಈ ಮೂರೂ ಜಾತಿಗಳಿವೆ. ಈ ಮೂರು ಜಾತಿಗಳೇ ಜೀವನವನ್ನು ನಿರ್ಧರಿಸುವಂಥವು. ಈ ಮೂರು ಜಾತಿಗಳಲ್ಲಿ ಶಾನಭಾಗ ಮಾಮನದ್ದು ಮೊದಲ ಜಾತಿ-ಉತ್ತಮ. ಸಾತ್ವಿಕರಾಗಿದ್ದ ಅಪ್ಪ-ಅಮ್ಮ-ಮಗನಿಗೆ ನಿತ್ಯ ಟೊಮ್ಯಾಟೋ ಸಾಸಿವೆಯೇ ಪ್ರಿಯವಾಗಿತ್ತು. ಇಂತಹ ಶಾನಭಾಗ ಮಾಮ ಕಷ್ಟಗಳನ್ನೆಲ್ಲ ಮರೆಯಲು ಗುರುವಿಗೆ ಶಿಷ್ಯನಂತಿದ್ದ ನನ್ನನ್ನು ಹತ್ತಿರ ಕೂರಿಸಿಕೊಂಡು ಕಥೆ ಹೇಳುತ್ತಿದ್ದ.  

ಮಣಕಿ ಗ್ರೌಂಡು ಕುಮಟಾದಲ್ಲಿ ಸಿಕ್ಕಾಪಟ್ಟೆ ಫೇಮಸ್ಸು; ಬೆಂಗಳೂರಿನಲ್ಲಿ ಅರಮನೆ ಮೈದಾನ ಇದ್ದಾಹಾಗೇ ಕುಮಟಾದಲ್ಲಿ ಅದೇ ಬಹುದೊಡ್ಡ ಮೈದಾನ. ಅಲ್ಲಿನ ಪ್ರಾದೇಶಿಕ ರೋಚಕ ಕಥೆಗಳು ಒಂದೆಡೆಗಾದರೆ, ಹೆರವಟ್ಟಾದ ಭಾಗದ ಕಥೆಗಳು, ಕೂಜಳ್ಳಿ-ವಾಲಗಳ್ಳಿ-ಕತಗಾಲ-ಕಾಗಾಲ-ಅಘನಾಶಿನಿ-ಹೆಗಡೆ ಹೀಗೇ ಸುತ್ತಲ ಎಲ್ಲಾ ಊರುಗಳ ಅಪರೂಪದ ಕಥೆಗಳನ್ನು ಮಾಮ ನನಗೆ ಹೇಳುವುದು ಅಭ್ಯಾಸವಾಗಿತ್ತು. ಹೇಳದಿದ್ದರೆ ಅವರಿಗೂ ಬೇಜಾರು; ಕೇಳದಿದ್ದರೆ ನನಗೂ ಬೇಜಾರು. ತಮಗೆ ತಿಳಿದ ಶಬ್ದಗಳಲ್ಲಿ ರಸವತ್ತಾಗಿ ಬಣ್ಣಿಸುತ್ತಿದ್ದ ಶಾನಭಾಗಮಾಮನ ಕಥೆಗಳನ್ನು ನಿತ್ಯವೂ ಸಂಧ್ಯಾವಂದನೆಯೆಂಬಂತೆ ಅರ್ಧತಾಸು ಕೇಳಲೇಬೇಕು. ರಜೆಯಿದ್ದರೆ ಅದು ತಾಸಿನವರೆಗೂ ವಿಸ್ತರಿಸಲ್ಪಡುತ್ತಿತ್ತು ಮಾರಾಯ್ರೆ.

ಹೀಗೆ ಒಂದು ದಿನ ಸ್ವಲ್ಪ ಒಣದ್ರಾಕ್ಷಿ ಹಿಡುಕೊಂಡು ಶಾನಭಾಗ ಮಾಮನಲ್ಲಿ ಕಥೆ ಕೇಳಲು ಹೋಗಿದ್ದೆ. "ಅರೇ ಭಟಮಾಮ್ ತೇ ಕಸಲ್ರೆ ಮಾರಾಯ? ಮಕ್ ನಕ ಮಕ್ ನಕ" [ಅರೇ ಭಟ್ ಮಾಮ್,(ಅವರು ತಮಾಷೆಗೆ ನನ್ನನ್ನು ಸಂಬೋಧಿಸುತ್ತಿದ್ದುದೇ ಹಾಗೆ)ಅದೆಂಥದೊ ಮಾರಾಯ? ನಂಗ್ ಬ್ಯಾಡ ನಂಗ್ ಬ್ಯಾಡ] ಅಂದರು. ನಾನು ಬಿಡ್ತೇನೆಯೇ? "ವೈನಿ, ತಗೊಳಿ" [ಅತ್ತಿಗೆ, ತಗೊಳಿ] ಅಂತ ಅವರ ಹೆಂಡತಿ ಕೈಲಿ ಕೊಟ್ಟು ಒಳಗೆ ಕಳಿಸುವುದರಲ್ಲಿ ಯಶಸ್ವಿಯಾದೆ. ಕಡುಬಡತನದಲ್ಲೂ ಸಹ ಏನೂ ಬೇಡವೆಂಬ ಭಾವನೆ ಅದೆಷ್ಟಿತ್ತು ಎಂದು ಹೇಳುವ ಸಲುವಾಗಿ ಈ ಸಂಗತಿಯನ್ನು ಹೇಳಬೇಕಾಯ್ತಷ್ಟೆ. ಅಂದಿನ ನಮ್ಮ ಕಥಾನಕ ಆರಂಭವಾಗಿತ್ತು: "ಮಧ್ಯರಾತ್ರೀಲಿ ರುಂಡ ಇಲ್ಲದ ಸರದಾರ ಕುದುರೆ ಏರಿ ಹೋಗ್ತಾನೆ! ಎಲ್ಲಿ ಗೊತ್ತುಂಟೊ? ಬಸ್ತಿಪೇಟೆ ಆ ಸಣ್ಣ ಗುಡಿ ಇದ್ಯಲ್ಲಾ? ಅಲ್ಲಿಂದ ಹೊರಟು ಮೂರ್ಕಟ್ಟೆ ತನಕ ದಡದಡ ದಡದಡ ಓಡಾಡುದನ್ನ ನೋಡಿದ ಜನ ಇದ್ದಾರೆ. ಹಿಂದೆ ಯಾವ್ದೋ ಕಾಲ್ದಲ್ಲಿ ಯುದ್ಧ ಮಾಡಿದ ಸೈನಿಕ ಆಗಿದ್ನೋ ಏನೋ ಗೊತ್ತಿಲ್ಲ. ಅಲ್ಲಿ ಈ ರೀತಿ ನಡೆಯೂದಂತೂ ಗ್ಯಾರಂಟಿ. ಅಪ್ಪಿತಪ್ಪಿ ಅಂವ ಹೋಗುವಾಗ ಎದುರಿಗೆ ಸಿಕ್ಕದ್ರೆ ಬದುಕೂದೆ ಕಷ್ಟ ಅಂತಾರೆ."    

ಆ ಕಾಲದಲ್ಲಿ ಕುಮಟಾ-ಹೊನ್ನಾವರಗಳಂತಹ ನಮ್ಮ ಪಟ್ಟಣಗಳಲ್ಲಿ ರಾತ್ರಿ ಹತ್ತುಗಂಟೆಯ ನಂತರ ಥೇಟ್ ಹಳ್ಳಿಕೊಂಪೆಯ ವಾತಾವರಣ! ರಸ್ತೆಯಲ್ಲೆಲ್ಲ ನರಹುಳ ಬೇಕಂದ್ರೆ ಸಿಗ್ತಿರಲಿಲ್ಲ. ಹಳ್ಳಿಗಳಿಗೆ ಹೋಗುವ ಕಡೇ ಬಸ್ಸುಗಳು ಸಂಜೆ ೭ ಗಂಟೆಗೇ ಲಾಸ್ಟು. ಆಮೇಲೆ ಅಲ್ಲೇ ಇದ್ದ್ರೆ ಯಾರ್ದಾದ್ರೂ ಪರಿಚಯದವರ ಮನೆಲೋ ಲಾಡ್ಜ್ನಲ್ಲೋ ಉಳಕೋಬೇಕು. ಯಾರದೋ ಮನೇಲಿ ಉಳ್ಕೊಳ್ಳುದಕ್ಕೆ ಬೇಜಾರು, ಲಾಡ್ಜಿಗೆ ಸುಮ್ನೇ ದುಡ್ಡು ಹಾಳು! ಹೀಗಾಗಿ ಹಳ್ಳೀಜನ ಪಟ್ಟಣಗಳಲ್ಲಿ ಕೋರ್ಟು-ಕಚೇರಿ, ವಸ್ತ್ರ-ಬಟ್ಟೆ-ಜವಳಿ, ಕಿರಾಣಿ ಸಾಮಾನು ಇಂಥಾದ್ದೆಲ್ಲ ಕೆಲಸ ಇದ್ದ್ರೆ ಬೆಳಿಗ್ಗೆ ಫಸ್ಟ್ ಬಸ್ಸಿಗೇ ಹೋಗಿ ಆದಷ್ಟೂ ಬೇಗ ಮುಗಿಸಿಕೊಂಡು, ಸಂಜೆಯೊಳಗೆ ಊರು ಸೇರಿಕೊಳ್ತಿದ್ರು. ಪಟ್ಟಣಗಳಲ್ಲೇ ಇರೋ ಮಂದಿ ತಮ್ಮ ವ್ಯಪಾರ-ಸಾಪಾರ ಮುಗಿಸಿ, ತಕ್ಕಡಿ-ಕಲ್ಲು ಒಳಗೆ ಸರಿಸಿ, ಅಂಗಡಿ ಬಾಗಿಲುಹಾಕಿ ಮನೆ ಸೇರಿಕೊಂಡ್ರೆ ಮಾರನೇ ದಿನ ಹತ್ತುಗಂಟೆ ಮೇಲೇ ಮತ್ತೆ ಅವರ ಕೆಲಸ. ಇದು ಮಾಮೂಲೀ ರುಟೀನು. ಚಗತೆಗಿಡ [ತಗಟೆ ಸೊಪ್ಪು]ರಾತ್ರಿ ಹೊತ್ತಿನಲ್ಲಿ ಎರಡೂ ಭಾಗದ ಎಲೆಗಳನ್ನು ಮುಚ್ಚಿಕೊಳ್ಳುವಂತೇ ರಾತ್ರಿ ಮುಚ್ಚಿಕೊಳ್ಳುವ ಪಟ್ಟಣಗಳಲ್ಲಿ ಮಳೆಗಾಲ-ಚಳಿಗಾಲದಲ್ಲಂತೂ ಗಸ್ತು ತಿರುಗುವ ಪೋಲೀಸರೂ ಇರ್ತಿರಲಿಲ್ಲ. ಕುಮಟಾ ಪೋಲೀಸರಿಗೆ ಮಧ್ಯರಾತ್ರೀಲಿ ರುಂಡ ಇಲ್ಲದ ಸರದಾರ ಕುದುರೆ ಏರಿ ಹೋಗುವುದು ಗೊತ್ತಿರ್ತದೆ ಬಿಡಿ. ಪೋಲೀಸರೇನು ಮನುಷ್ಯರಲ್ವೇ? ಅವರಿಗೂ ಮಕ್ಕಳು-ಮರಿಗಳು ಇದ್ದಾವೆ; ಒಂದೊಮ್ಮೆ ರಾತ್ರಿಯೆಲ್ಲಾ ತಿರುಗಿ ರುಂಡ ಇಲ್ದ ಸವಾರನ ಎದುರುಹಾಕಿಕೊಂಡ್ರು ಅಂತಿಟ್ಕೊಳಿ, ಏನಾದ್ರೂ ಹೆಚ್ಚು-ಕಮ್ಮಿ ಆದ್ರೆ ಅವರ ಸಂಸಾರದ ಗತಿ?

ವಿಷಯ ಹಾಗಿರಲಿ, ಇಂದು ಕುಮಟಾ-ಹೊನ್ನಾವರ ಎಲ್ಲಾ ಬದಲಾಗಿ ಹೋಗಿವೆ. ಅವುಗಳಿಗೂ ನಗರಗಳ ಲಕ್ಷಣ ಕ್ರಮೇಣ ಆವರಿಸಿಕೊಳ್ತಾ ಇದೆ. ಜನರಲ್ಲೂ ಮೊದಲಿನಷ್ಟ್ ಆತ್ಮೀಯ ಒಡನಾಟವಿಲ್ಲ;  ನವ [’ನಗ’]ನಾಗರಿಕತೆ ಜಾಗೃತವಾಗಿದೆ ಎಂದರ್ಥ! ಸರಕಾರ ಚತುಷ್ಪಥ ಮಾಡ್ತದಂತೆ. ಹಳ್ಳಿಹಳ್ಳಿಗಳಲ್ಲೂ ಬೇಕಾದಲ್ಲಿ ಬೇಡ್ದೇ ಇರುವಲ್ಲಿ ಎಲ್ಲಾ ಕಡೆಗೂ ರಸ್ತೆ, ತಾರು, ಬೋರು; ಓಡಾಡ್ತಾನೇ ಇರ್ತವೆ ಕಂತ್ರಾಟದಾರರ ಮತ್ತು ಅವರಿಗೆ ಕೆಲಸ ಕೊಡುವರರ ಕಾರು. ಶಾನಭಾಗ ಮಾಮ ಇಂದಂತೂ ಖಂಡಿತ ಬದುಕಿಲ್ಲ ಬಿಡಿ; ಅವರ ಹೆಂಡತಿಯೂ ಅಷ್ಟೆ. ಮಗ ಮಾತ್ರ ಅದೆಲ್ಲಿದ್ದಾನೋ ದೇವರಿಗಷ್ಟೆ ಗೊತ್ತು. ನಾನು ಕುಮಟಾಬಿಟ್ಟು ಬಹಳವರ್ಷವೇ ಕಳೀತು. ಅಂಥವರನ್ನೆಲ್ಲ ನೆನಪಿಸಿಕೊಳ್ಳುವುದೊಂದೇ ಉಳೀತು.