ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, October 31, 2012

ಪದ್ಯ ರಾಜ್ಯೋತ್ಸವ !


ಪದ್ಯ ರಾಜ್ಯೋತ್ಸವ !

ಕನ್ನಡದಲ್ಲಿ ಅನೇಕ ಬರಹಗಾರರು ಆಗಿಹೋಗಿದ್ದಾರೆ. ಒಬ್ಬೊಬ್ಬರ ಬರಹಗಳೂ ರೋಚಕ, ವಿಶಿಷ್ಟ. ಯಾವುದೋ ಹೊಸತನ ಅಲ್ಲಿ ಕಾಣುತ್ತದೆ. ಕನ್ನಡದ ಸೊಬಗನ್ನು ಹೆಚ್ಚಿಸಲು ಶ್ರಮಿಸಿದ ಅಂತಹ ಕವಿ-ಸಾಹಿತಿಗಳಿಗೆ ರಾಜ್ಯೋತ್ಸವದ ಸಮಯದ ವಂದನೆಗಳು. ಈ ಸಲ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಬಾರದೇಕೆ ಎಂಬ ಅನಿಸಿಕೆ ನನ್ನದಾಗಿತ್ತು. ದಾನ ಎಂಬುದನ್ನು ಯಾರಿಗೂ ಎಲ್ಲೂ ಹೇಳದೇ ಮಾಡಬೇಕಂತೆ. ರಾಜಕಾರಣಿಗಳ ಹಾಗೇ ಹತ್ತು ರೂಪಾಯಿ ಕೊಟ್ಟಿದ್ದಕ್ಕೇ ಹತ್ತತ್ತು ಸರ್ತಿ ಟಿವಿ ಜಾಹೀರಾತು ಬಿತ್ತರಿಸಿಕೊಳ್ಳುವ ಬದಲು ದಾನ ಪ್ರಚಾರವಿಲ್ಲದೇ ನಡೆಯಬೇಕಾದಂತಹ ಕೆಲಸವಂತೆ. ಹಾಗಾದರೆ ರಾಜ್ಯೋತ್ಸವದ ಆಚರಣೆಯಲ್ಲಿ ದಾನವಿದ್ದರೆ ಅದನ್ನು ಹೇಳಬಾರದು ಎಂದಾಯ್ತು! ಹೀಗಾಗಿ ಹಾಗೆ ಮಾಡುವ ಬದಲು ಜೀವದಾನ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡರೆ ಕೆಲವರಲ್ಲಿ ಅದನ್ನು ಕೇಳಬಹುದು ಎನ್ನಿಸಿತು. ಅದೇ ವಿಷಯವನ್ನಿಟ್ಟುಕೊಂಡು ಬರೆಯಲು ಹೊರಟೆ. ಹಾಗೆ ಹೊರಟಾಗ ದಾಸರು ಎದುರಾದರು. ಅವರ ಗಿಳಿಯ ಮರಿಯನು....ಎಂಬ ಹಾಡು ನೆನಪಿಗೆ ಬಂತು.

ಕುರಿಯಮರಿಗಳ ತಂದು ಮನೆಗಳ
ಹೊರಗೆ ಕಟ್ಟುತ ಸೊಪ್ಪು ಸದೆಗಳ
ಹೊರೆಯ ಚೆಲ್ಲಿಸಿ ಕೊಯ್ವ ಪರಿಯನು ತೋರಬೇಡೆನಗೆ |
ಹಿರಿದು ಕತ್ತಿಯ ದನದ ಕುತ್ತಿಗೆ
ಹರಿವ ಮಂದಿಯು ಹಂದಿ ಜೀವನ
ತೊರೆದು ಮಾನವರಾಗುವಂತೆಯೆ ಮತಿಯ ನೀಡುವುದು || 

ಭಾರತೀಯರಲ್ಲಿ ಎಲ್ಲರೂ ಶಾಕಾಹಾರಿಗಳಲ್ಲ ಎಂಬುದನ್ನು ಒಪ್ಪುತ್ತೇನೆ. ಆದರೆ ತನ್ನ ಬದುಕಿಗಾಗಿ ಇನ್ನೊಂದು ಜೀವಿಯ ಬದುಕನ್ನು ಕಸಿದುಕೊಳ್ಳುವುದು, ನಾಶಪಡಿಸುವುದು  ಆಗಬಾರದ ಕೆಲಸ. ಕೇಳಿದರೆ ’ಬುದ್ಧಿಜೀವಿಗಳು’ ವೈಜ್ಞಾನಿಕ ಕಾರಣ ಕೊಡುತ್ತಾರೆ: ಆಹಾರ ಸರಪಳಿ ಮೊದಲಾದ ವಾದವನ್ನು ಮಂಡಿಸುತ್ತಾರೆ. ಸನಾತನ ಧರ್ಮದ ಮೂಲ ಆದರ್ಶವೇ ಅಹಿಂಸೆ. ನಮಗೆ ಗೊತ್ತಿಲ್ಲದ ಅದೆಷ್ಟೋ ಸಂಗತಿಗಳು ಆಗಾಗ ವರದಿಯಾಗುತ್ತಿರುತ್ತವೆ; ಅವುಗಳನ್ನು ನೋಡಿಯಾದರೂ ತಿಳಿದುಕೊಳ್ಳಬೇಕು ಮಾನವೀಯತೆ ಎಂದರೇನು ಎಂಬುದನ್ನು. ಕೋಲಂಬಿಯಾದಲ್ಲಿ ಜನಿಸಿದ ಒಂದು ಮಗುವಿನ ಕುರಿತು ದಿನಪತ್ರಿಕೆಯಲ್ಲಿ ಓದಿದೆ. ಒಂದು ತಿಂಗಳ ಗಂಡು ಮಗು ತನ್ನನ್ನು ಹಾಸಿಗೆ, ಸೂಟ್ ಕೇಸ್, ಫ್ರಿಜ್ ಮೊದಲಾದ ಜಾಗಗಳಲ್ಲಿ ಬಚ್ಚಿಟ್ಟುಕೊಳ್ಳುವುದಂತೆ. ಕಣ್ಣುಬಿಟ್ಟರೆ ಕೆಂಡದುಂಡೆಯ ರೀತಿಯಂತೆ, ಉಸಿರಿನಲ್ಲಿ ಬೆಂಕಿಯಂತೆ! ಬಟ್ಟೆ-ಸೋಫಾ ಎಲ್ಲಾ ಸುಟ್ಟ ಕಲೆಗಳಿವೆಯಂತೆ. ಯಾರೋ ಭಸ್ಮಾಸುರನೇ ಇರಬೇಕು!!  ಹಿಂಸ್ರಪ್ರಾಣಿಗಳಿಗೂ ಪಕ್ಷಿಗಳಿಗೂ ಬುದ್ಧಿ ಮಾನವ ಮಟ್ಟದಲ್ಲಿಲ್ಲ. ಅವು ಹೊಟ್ಟೆಗಾಗಿಯೇ ಹುಟ್ಟಿವೆ. ಅದಕ್ಕಾಗೇ ಬದುಕುತ್ತವೆ. ಆದರೆ ಮಾನವ ಹಾಗಲ್ಲವಲ್ಲ?

ಯಾವುದೇ ಜನ್ಮವಿದ್ದರೂ ಕುರಿ, ಕೋಳಿ, ದನ, ಮೊಲ, ಎಮು, ಒಂಟೆ, ಊರ ಹಂದಿ ಈ ರೀತಿಯಾದ ಜನ್ಮಗಳನ್ನು ಮಾತ್ರ ನೀಡಬೇಡವೆಂದು ಭಗವಂತನಲ್ಲಿ ನನ್ನ ಪ್ರಾರ್ಥನೆ. ಅವುಗಳನ್ನು ಎಳೆಯುವುದು, ಕಾಲು ಮುರಿಯುವುದು, ಸಾಗಿಸುವುದು, ಕತ್ತರಿಸುವುದು,  ಸಾಯುವ ಮುನ್ನ ಕೊಡುವ ಚಿತ್ರಹಿಂಸೆಗಳು ಅಯ್ಯೋ ಶಿವನೇ .....

ಭರದೆ ಎಳೆಯುತ ಗಾಡಿಗೇರಿಸಿ
ಗರಗರನೆ ತಿರುಗಿಸುತ ಕೋಳಿಯ
ಜರಿದು ಜಾಗವೆ ಇರದ ಪಂಜರದೊಳಗೆ ತೂರಿಸುತ |  
ಸರಿಸಿ ತೆರೆಯುತ ಕದವನಾಪರಿ
ಬಿರುಸಿನಿಂದಾಚೆಯಲಿ ಕತ್ತನು
ತಿರುಚಿ ಎಸೆಯುತ ಸುಡಿಸಿಕೊಳ್ಳುವ ಜನ್ಮಬೇಡೆನಗೆ || 

’ಕೊಂದು ಪಾಪ ತಿಂದು ಪರಿಹಾರ’ ಎಂಬುದರ ಅರ್ಥವ್ಯಾಪ್ತಿ ಬೇರೇನೇ ಇದೆ. ಆದರೆ ಅನುಕೂಲಕ್ಕಾಗಿ ನಮ್ಮ ಜನ ಮಾಡಿಕೊಂಡ ರೀತಿ ಏನೆಂದರೆ ಜೀವಿಗಳನ್ನು ಕೊಂದರೆ ತಮಗೆ ಪಾಪವಿಲ್ಲ, ಅವು ನಮ್ಮ ಆಹಾರವಾದ್ದರಿಂದ ಆ ಪಾಪದಿಂದ ನಾವು  ವಿಮುಕ್ತಿ ಪಡೆಯುತ್ತೇವೆ -ಎಂದು. ಇದು ಅಕ್ಷರಶಃ ಅಸತ್ಯ! ಸಾಯುವಾಗ ಪ್ರಾಣಿಯೋ ಪಕ್ಷಿಯೋ ತನ್ನನ್ನು ಸಾಯಿಸಿದವರನ್ನು, ವ್ಯವಹಾರಿಕ ಲಾಭಕ್ಕಾಗಿ ತನ್ನ ಸಾವಿಗೆ ಕಾರಣರಾದವರನ್ನೂ, ಸಾಯಿಸಿದ ನಂತರ ತಿಂದು ಪರೋಕ್ಷ ಸಾವಿಗೆ ಕಾರಣರಾದವರನ್ನೂ ಶಪಿಸುತ್ತದಂತೆ. ಕೋಳಿಯೊಂದು ಸಾಯುವಾಗ ಹಾಗೆ ಶಪಿಸಿದರೆ ಅದಿಷ್ಟೂ ಜನ ಕೋಳಿಗಳಾಗಿ ಜನಿಸಬೇಕಾಗುತ್ತದೆ..ಅದೇ ರೀತಿ, ವಧೆಗೊಳಗಾಗುವ ಯಾವುದೇ ಜೀವಿ ಇರಲಿ ತನ್ನ ಜನ್ಮವೇ ಬರಲಿ ಎಂದು ಅವರಿಗೆ ಶಪಿಸುವುದಂತೆ. ಕೊಂದು ಪಾಪ ಪರಿಹಾರ ಆಗುವುದು ಆ ಪಾಪದಿಂದ ಎದುರಾಗಬಹುದಾದ ಸಮಸ್ಯೆಗಳನ್ನೂ ದುಃಖವನ್ನೂ ಜನ್ಮಾಂತರಗಳವರೆಗೂ ಉಂಡು ಎಂದುದೇ ಆ ಗಾದೆಯ ಅರ್ಥವಾಗಿದೆ.  ಆಹಾರ ವಿಷಯಕವಾಗಿ ’ಹಿಂದೂ ಜೀವನಧರ್ಮ’ದಲ್ಲಿ ಮುಂದೆ ಪ್ರತ್ಯೇಕ ಅಧ್ಯಾಯ ಬರುತ್ತದೆ, ಅಲ್ಲಿ ಬಹಳ ವಿಸ್ತೃತ ಮಾಹಿತಿ ಕೊಡಲು ಉದ್ಯುಕ್ತನಾಗುತ್ತೇನೆ.   

ಕರೆದು ಊಡಿಸಿ ಮುದ್ದುಗರೆವರೆ
ತೊರೆದು ಕರುಣಾಭಾವವೆಲ್ಲವ
ನೆರೆದು ಸುತ್ತಲು ಎತ್ತಿ ಕತ್ತರಿಸುವರು ಮೊಲಗಳನು |
ಹರಣವಪ್ಪುವ ಜೀವಿಗಳನೇ 
ಕರಿದು ತಿಂದರೆ ಪಾಪ ಪೋಪುದು
ಅರರೆ ನಿಮಗೇನಷ್ಟು ಸಂಕಟವೆಂಬ ಧೋರಣೆಯು ||   

ನಿತ್ಯ ಬೆಳಿಗ್ಗೆ ಎದ್ದರೆ ಅಮ್ಮನ ಹಾಲಿಲ್ಲದಿದ್ದರೂ ಪರವಾಗಿಲ್ಲ ಗೋವಿನ ಹಾಲು ಬೇಕೇಬೇಕು. ಅದನ್ನು ಯಾಂತ್ರಿಕವಾಗಿ ತಯಾರಿಸಲು ಸಾಧ್ಯವೇ ಇಲ್ಲ! ಸಿಗುವ ಹಾಲಿನ ಪುಡಿಗಳೆಲ್ಲಾ ಹಾಲನ್ನು ಆವಿಯಾಗಿಸಿ ಘನೀಕೃತರೂಪಕ್ಕೆ ತಂದವುಗಳೇ. ಎಂದಮೇಲೆ ಹಾಲು ಕೊಟ್ಟು ನಮ್ಮ ಬದುಕನ್ನು ಹಸನುಮಾಡುವ ಜೀವಿಯನ್ನು ಕೊಂದು ತಿನ್ನುವುದು ಎಂಥಾ ದುಷ್ಟತನ ಅಲ್ಲವೇ? ಮೊನ್ನೆ ಯಾರದೋ ಚಿತ್ರವನ್ನು ನೋಡಿದೆ: ಮನೆಯಂಗಳದಲ್ಲಿ ದಪ್ಪನೆಯ ಕುರಿ ಕಟ್ಟಿಹಾಕಿದ್ದರು. ಮಗುವಿನೊಡನೆ ಅಜ್ಜ ಕುರಿಯ ಪಕ್ಕ ನಿಂತಿದ್ದಾರೆ. ಮಗು ಕುರಿಯನ್ನು ನೋಡಿ ಆಡುತ್ತಿದೆ. ತಿಂಗಳುಗಳ ಕಾಲ ಸಾಕಿದ ಒಡೆಯನೇ ತನನ್ನು ಕತ್ತರಿಸುವಾಗ ಕುರಿಗೋ ಮೊಲಕ್ಕೋ ಆಗಬಹುದಾದ ಮಾನಸಿಕ ಯಾತನೆ ಎಷ್ಟಿರಬಹುದು ? ಮುದ್ದಾದ ಮೊಲ ಕಾಡಲ್ಲಿ ಆಡಿಕೊಂಡಿತ್ತು, ಅದನ್ನೂ ನಾಡಿಗೆ ತಂದು ಬೆಳೆಸುವ ಪರಿ ಬೆಳೆಯಿತು. ಮೊಲಗಳ ವಂಶಾಭಿವೃದ್ಧಿಯನ್ನು ಕೃತಕವಾಗಿಯಾದರೂ ಮಾಡಿಸುವ ಮಂದಿ ಕಚಕ್ಕನೆ ಅವುಗಳನ್ನು ಕತ್ತರಿಸುವಾಗ ಯಾವ ಕರುಣಾಭಾವವೂ ಬಾರದಲ್ಲಾ ಶಿವನೇ...

ದಾಸರಿಗೆ ಕೈಮುಗಿದು ಬೀಳ್ಕೊಟ್ಟು ಸ್ವಲ್ಪ ಮುಂದೆ ಸಾಗುತ್ತಿದ್ದಾಗ ಸರ್ವಜ್ಞ ಎದುರಾದ.

ಖಂಡಿಸದೆ ಕರಣವನು ದಂಡಿಸದೆ ದೇಹವನು
ಉಂಡುಂಡು ಸ್ವರ್ಗವನು ಬಯಸಿದೊಡೆ ಅದನೇನು
ರಂಡೆಯಾಳುವಳೇ -ಸರ್ವಜ್ಞ

ಎಂದಿದ್ದ ಸರ್ವಜ್ಞನ ದರುಶನ ಸಿಗುತ್ತಿದ್ದಂತೆಯೇ ಅನ್ನಿಸಿದ್ದು ಹೀಗೆ :

ಗಂಡುಬೀರಿಗಳೊಡನೆ ಗುಂಡನ್ನೂ ತುಂಡನ್ನೂ
ಉಂಡುಂಡು ಅಡ್ಡಡ್ಡ ಉದ್ದುದ್ದ ಮಲಗುವುದೇ
ಭಂಡ ಕಲಿಗಾಲ-ಗರ್ಮಜ್ಞ

ಸರ್ವಜ್ಞ ನನ್ನ ಒಂದೇ ಹಾಡಿಗೆ ಸುಸ್ತಾದ ಹಾಗೇ ಕಂಡಿತು! ಯಾಕೆಂದರೆ ಅವರೆಲ್ಲಾ ಬಾಳಿದ್ದು ರೀತಿನೀತಿಯಲ್ಲಿ. ಈಗ ಅದನ್ನೆಲ್ಲಾ ಅಕ್ಷರಗಳಲ್ಲಿ ಮುದ್ರಿಸಿ ಕಟ್ಟುಹಾಕಿಸಿ ಗೋಡೆಗಳ ಮೇಲೋ ಅವುಗಳ ಛಾಯಾಮುದ್ರಣವನ್ನು ಫೇಸ್ ಬುಕ್ಕಿನಲ್ಲೋ ಹಾಕಿ ದೊಡ್ಡತನ ತೋರಿಸಿಕೊಳ್ಳುವ ಕಾಲ. ಸರ್ವಜ್ಞರನ್ನು ಅಷ್ಟಕ್ಕೇ ಬೀಳ್ಕೊಟ್ಟೆ.

ಉದಯವಾಗಲಿ ನಮ್ಮ ಚಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು...... ಹಾಡು ದೂರದಿಂದ ಕೇಳಿಬಂತು. ದೂರದಲ್ಲಿ ಕೂತ ಹುಯಿಲಗೋಳ ನಾರಾಯಣರಾಯರು ಹಾಡುತ್ತಿದ್ದರು ಎಂದರು ಬೇರೇ ಹೇಳಬೇಕೇ?

ಡೀನೋಟಿಫೈ ಮಾಳ್ಪ ಯಡ್ಡಿಗಳು ಇಹ ನಾಡು
ಡಾನುಗಳು ಧನಮದದಿ ಆಳುತಿಹ ಬೀಡು
ಢಾಳಾಗಿ ಕಾಣುತಿಹ ಹಾಳು ಹಂಪೆಯ ಗೂಡು
ಡಾಮಿನನ್ಸ್ ಗಣಿಧಣಿಗಳುಂಡುಳಿದ ಬಾಡು !

ನಾನು ಪ್ರಯತ್ನಿಸುತ್ತಿರುವಾಗಲೇ ನಾರಾಯಣರಾಯರಿಗೆ ಏನನ್ನಿಸಿತೋ.. ಆಯ್ಯಯ್ಯೋ ತಾನು ಕಂಡ ಸುಂದರ ಕನ್ನಡ ನಾಡು ಈ ರೀತಿ ಆಧ್ವಾನಕ್ಕೆ ಒಳಗಾಗಿದೆಯೇ ಅನ್ನಿಸಿರಬೇಕು. ಹಾಡುವುದನ್ನೇ ನಿಲ್ಲಿಸಿಬಿಟ್ಟರು.

ಪಂಪ, ರಾಘವಾಂಕ, ಕುಮಾರವ್ಯಾಸ, ರನ್ನ, ಜನ್ನ, ಪೊನ್ನ- ಕನ್ನಡದ ಇಂತಿಂಥಾ ಕವಿಗಳು ಬರುತ್ತಾರೇನೋ ಎಂದು ದಾರಿ ಕಾದೆ. ಹೊಸಗನ್ನಡದ ಅದರಲ್ಲೂ ನವ್ಯೋತ್ತರ ಕಾವ್ಯಗಳ ಭರಾಟೆಯಲ್ಲಿ ಮೂಲ ಕನ್ನಡದ ಸೊಬಗು, ಛಂದಸ್ಸು, ವ್ಯಾಕರಣಾದಿ ಅಂಗಸೌಷ್ಠವ ಕಳೆದು ಹೋಗಿದ್ದುದರಿಂದ ಬಹಳ ಖೇದ ವ್ಯಕ್ತಪಡಿಸಿದರು. ಆ ನಡುವೆ ಅಲ್ಲೆಲ್ಲೋ ಆದಿಶಂಕರರು ಹಾದುಹೋದಹಾಗೇ ಭಾವಸಾಯ್ತು, ಅವ ಬಹುದೊಡ್ಡ ಆಶುಕವಿಯೇ ತಾನೇ? ಅವರ ಕ್ಷಮೆಕೋರಿ ಹೀಗೊಂದು ಕವನದ ಪಾದ ಮೂಡಿಬಿಟ್ಟಿತು: [ಜಯ ಜಯಹೇ ಮಹಿಷಾಸುರ ಮರ್ದಿನಿ ಎಂಬ ಮಹಿಷಾಸುರ ಮರ್ದಿನೀಸ್ತೋತ್ರದ ಛಾಪಿನಲ್ಲೇ ಬಂದುಬಿಡಬೇಕೆ? ನವರಾತ್ರಿ ಮೊನ್ನೆಯಷ್ಟೇ ಮುಗಿಯಿತಲ್ಲವೇ ಅದಕ್ಕೇ ಇರಬಹುದು!]

ಭಲೆಭಲೆಯಕ್ರಮಸಕ್ರಮಸಕ್ರಮ ಅಕ್ರಮಸಕ್ರಮನಡೆದಿಪುದೈ
ಅಲೆಯಲೆಯೇಳುತ ಗಣಿಧಣಿಗಳ ಹಲ ಹಾಲಾಹಲವನು ನುಂಗಿಪುದೈ
ಕಲುಷಿತಗೊಂಡವು ನದಿಗಳು ವಾಯುವು ನಗರೀಕರಣದ ಆರ್ಭಟದಿ
ಮಲಿನವದೆಲ್ಲವು ನಲಿವದೆ ಇಲ್ಲವು ಜಯಕರ್ನಾಟಕದೀ ನೆಲದಿ

ಕಲರವವಿಲ್ಲದ ಹಕ್ಕಿಗಳಿಂಚರ ಹೊಟ್ಟೆಯಪಾಡಿಗೆ ನಡೆದಿಹುದು !
ಗುಲಗುಂಜಿಯ ಆಕಾರದ ಹಾರವು ಆನೆಯ ಹೊಟ್ಟೆಗೆ ಲಭಿಸುವುದು !
ಗೆಲುವಿನ ನಗೆಯೊಳು ಆಳ್ವರು ಮೆರೆದಿರೆ ಪ್ರಜೆಗಳು ಕಾಲ್ಕಸವಾಗಿಹರು
ಕಲಿತ ಭುಶುಂಡಿಗಳೆಲ್ಲರು ಸಂದರು ಝಣಝಣವೆಣಿಸುತಲೀನೆಲದಿ !!

ಶಂಕರಾಚಾರ್ಯರ ಆಕೃತಿಗೆ ನಾನೇ ಸಾಷ್ಟಾಂಗ ನಮಸ್ಕಾರ ಹಾಕಿಬಿಟ್ಟೆ ಬಿಡಿ, ಯಾಕೆಂದರೆ ಅವರ ಸ್ತೋತ್ರದ ರಾಗ ಬಳಸಿಕೊಂಡಿರುವೆನಲ್ಲಾ-ಅದಕ್ಕೇ.

ಮೆಚ್ಚಿನ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಮನೆ ಹಾದಿಯಲ್ಲೇ ಇತ್ತು.

ದೂರದೊಂದು ತೀರದಿಂದ 
ತೇಲಿ ಪಾರಿಜಾತ ಗಂಧ
ದಾಟಿಬಂತು ಬೇಲಿಸಾಲ 
ಮೀಟಿ ಹಳೆಯ ಮಧುರ ನೋವ ........

ಇದು ಯಡ್ಯೂರಣ್ಣೋರಿಗೆ ಹಾಡಿದ್ದೇ ಅಂತ ಅನಿಸಿಬಿಟ್ಟಿತು. ಅವರಿಗೆ ಪಾರಿಜಾತದ ಗಂಧ ಬೇಲಿದಾಟಿ ಬರುತ್ತದೆ ಎಂದು ಹೇಳ್ತಾರಲ್ಲಾ........! ಹಳೆಯ ಕುರ್ಚಿಯ ಹೊಸ ಮಧುರನೋವುಗಳನ್ನು ಸದಾ ಅನುಭವಿಸುತ್ತಿರುವ ಅವರ ಸಲುವಾಗೇ ಭಟ್ಟರು ಬರೆದಿರಬಹುದೇ?? ಕೇಳೋಣ ಎಂದುಕೊಳ್ಳುತ್ತಿರುವಾಗಲೇ ಯಾರೋ ಹೇಳಿದರು "ಭಟ್ಟರು ಮನೇಲಿಲ್ಲಾ ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಿದ್ದಾರೆ" ಎಂದು, ಅನಿವಾರ್ಯ ನಮ್ಮ ಗಾಡಿ ಮತ್ತೆ ಚಾಲೂ ಆಯ್ತು. ಭಟ್ಟರ ಮನೆಯಿಂದ ಕಿಲೋಮೀಟರು ಹೋಗಿತ್ತೋ ಇಲ್ವೋ ಬಿ.ಆರ್.ಎಲ್ಲು ಬಂದುಬಿಡಬೇಕೆ? "...ಮಿತ್ರ ಎಚ್ಚೆಸ್ವಿಯವರನ್ನು ಕಾಣಲು ಬಂದಿದ್ದೆ" ಎಂದು ಕನ್ನಡಕ ಹಿಂದಕ್ಕೆ ಜಾರಿಸಿ ಕೂರಿಸಿದರು. ಕೆಲವು ದಿನಗಳ ಹಿಂದೆ ’ಮಯೂರ’ಕ್ಕೆ ಡುಂಡಿರಾಜರ ಬಗ್ಗೆ ಬುಕೊಟ್ಟ ಲೇಖನದ ಗುಂಗಿನಲ್ಲೇ ಇನ್ನೂ ಇದ್ದರೋ ಎನ್ನಿಸಿತು. ಆಗಾಗ ನಡೆಸುವ ಸಂಜೆಯ ’ಸಾಂಸ್ಕೃತಿಕ’ ಕಾರ್ಯಕ್ರಮಕ್ಕೆ ಡುಂಡಿ ಬರುತ್ತಿಲ್ಲ ಎಂಬ ಬೇಸರದಲ್ಲೇ ದನಿ ಎತ್ತಿದ ಹಾಗಿತ್ತು. " ಏನ್ ಸ್ವಾಮೀ ನೀವು ಜಾಲಿ ಬಾರಿನಲ್ಲಿ .......ಹಾಡುಬರೆದಿದ್ದು ಯಾವಾಗ?" ಎಂದೆ. ಅದನ್ನು ನೆನಪಿಸಿಕೊಂಡು ಹೇಳುತ್ತೇನೆ ಎನ್ನುವಾಗ ಕೆಮ್ಮುತ್ತಲ್ಲೇ ಇದ್ದರು. ಬೆಂಗಳೂರಿನ ಹವಾಮಾನ ಸರಿಯಿಲ್ಲ..ಇನೂ ಎರಡುಮೂರು ದಿನ ಜಿನುಗು ಮಳೆ ಸೈಕ್ಲೋನು ಆಮೇಲೆ ಒಂದಿನ ಸಿಗೋಣ ಹೇಳ್ತೇನೆ ಎಂದ್ರು. ಸರಿ ಎಂದು ಧನ್ಯವಾದ ಅರ್ಪಿಸಿದೆ. ಎಂದಿನಂತೇ ಅದೇ ದೇಶಾವರಿ ನಗೆ ಕಂಡಾಗ

ಬಾರೇ ರಾಜಕುಮಾರಿ ....ಹೋಗೋಣ ನಾವ್ ಜಂಬೂ ಸವಾರಿ ಎಂದು ಹಿನ್ನೆಲೆಯಲ್ಲಿ ಯಾರೋ ಹಾಡಿದ ಹಾಗಿತ್ತು!

ಎಚ್ಚೆಸ್ವಿ ಮನೆಗೆ ಹೋಗಿದ್ದೆ ಎಂದ ಬಿ.ಆರ್.ಎಲ್ಲು ಎಚ್ಚೆಸ್ವಿ ಹಾಡಿನ ನೆನಪಿಗೆ ಕಾರಣರಾಗಿಬಿಟ್ಟಿದ್ದರು.

ಲೋಕದ ಕಣ್ಣಿಗೆ ಶೋಭಕ್ಕ ಕೂಡ ಎಲ್ಲರಂತೇ ಒಂದು ಹೆಣ್ಣು
ಆದರೆ ಪಕ್ಷದ ಎಲ್ಲಾ ಜನರಿಗು ಶೋಭಕ್ಕನಾಟದೆ ಕಣ್ಣು !

ಮಂತ್ರಿ ಶೋಭಾ ಅವರು ಏನುಮಾಡ್ತಿದ್ದಾರೆ ಎಂಬುದರಮೇಲೆ ಬಿ.ಜೆ.ಪಿಯ ಎಲ್ಲರಿಗೂ ಕಣ್ಣು ಇರುವುದು ಸುಳ್ಳಲ್ಲ. ಅಲ್ಲಾಸ್ವಾಮೀ ಕವಿಗಳಿಗೆ ಇದೆಲ್ಲಾ ಹೇಗೆ ಮೊದಲೇ ತಿಳಿದುಹೋಗುತ್ತದೆ ಎಂಬುದು ನನಗೆ ತಿಳಿಯುತ್ತಿಲ್ಲ! ಜಾಸ್ತಿ ತಲೆಕೆಡಿಸಿಕೊಳ್ಳಲು ಸಮಯ ಇರಲಿಲ್ಲ. ಗಾಡೀಲಿ ಪೆಟ್ರೋಲು ಖಾಲಿ ಆಗಿಬಿಟ್ರೆ ಎಂಬ ಹೆದರಿಕೆ ಇತ್ತು-ಈಗೀಗ ೯-೬ ಮಾತ್ರ ಪೆಟ್ರೋಲ್ ಸಿಗುವುದಲ್ಲವೇ ಹೀಗಾಗಿ, ಸಮಯ ಮೀರಿಹೋದ್ರೆ ಕಷ್ಟ ಎಂದು ಅಲ್ಲಿಂದ ಗಾಡಿ ಹೊರಟಿದ್ದೇ ಹೊರಟಿದ್ದು ಟಿ.ಆರ್. ಮಿಲ್ಲಿನ ತಿರುವಿನಲ್ಲಿ ಡುಂಡಿ ನಿಂತುಕೊಂಡಿದ್ದರು. "ಬನ್ನಿ ಬನ್ನಿ ಮಳೆ ಬರ್ತಾ ಇದೆ, ನಾಳೆ ನಿಮ್ಮ ಪುಸ್ತಕ ’ಹನಿದರ್ಶಿನಿ’ ಬಿಡುಗಡೆ ಬೇರೇ ಇದೆ, ನೆಗಡಿ ಆದ್ರೆ ಕಷ್ಟ " ಎಂದೆ. ಹಾಗೇನಿಲ್ಲ ಬಸ್ ಬರುತ್ತಲ್ಲ ಈಗ ಎಂದವರಿಗೆ ಬಿ.ಆರ್.ಎಲ್ಲು ಹೇಳಿದ ಸೈಕ್ಲೋನಿನ ಹಕೀಕತ್ತು-ವರದಿ ಒಪ್ಪಿಸಿದೆ.

ಬೆಂಗಳೂರಿನಲ್ಲೀಗ
ಮೂರುದಿನ ಸೈಕ್ಲೋನು
ಇಲ್ಲ ಏನೂ ಪರಿಹಾರ
ಹಾಕಿಕೊಳ್ಳಿ ಹೆಡ್ ಫೋನು
ಆನಂದಿಸಿ ಕದ್ರಿ
ಗೋಪಾಲನಾಥರ ಸ್ಯಾಸ್ಕ್ಸೋಫೋನು
ಇದೊಂದೇ ಪನಿವಾರ

ಆಯ್ತಾಯ್ತು ಸ್ವಾಮೀ ರಾಜ್ಯೋತ್ಸವಕ್ಕೆ ಮಿತ್ರರಾದ ನಿಮ್ಮನ್ನು ಬಿಡಲಾಗುತ್ಯೇ ? ಎಂದೆ. ಥಂಢಿಯಲ್ಲೇ ಕೈಕುಲುಕಿ ಹೋಂಡಾ ಹತ್ತಿ ಮತ್ತೆ ಹೊರಟೆ, ಸೀದಾ ಮನೆಗೆ. ದಾರಿಯುದ್ದಕ್ಕೂ ಅಡಿಗ, ಬೇಂದ್ರೆ, ಡೀವೀಜಿ, ಅನಕೃ, ಮಾಸ್ತಿ, ಕುವೆಂಪು, ಕಣವಿಯವರು ಎಲ್ಲರೂ ಹಚ್ಚಿದ ಹಣತೆಗಳು ಹಲವರ ಮನೆಗಳಲ್ಲಿ ಬೆಳಗಿದ ಹಾಗೇ ಕಾಣುತ್ತಿತ್ತು.

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪಾ
ಹಚ್ಚೇವು ಕನ್ನಡದ ದೀಪ  

ಕರ್ಕಿಯವರ ಹಾಡನ್ನು ಹಾಡುವ ಮನಸ್ಸು....ಯಾಕೇಂತ ನಿಮಗೂ ನನಗೂ ಖಂಡಿತಾ ಗೊತ್ತು. ನಾಳೆ ರಾಜ್ಯೋತ್ಸವ; ಇದು ಕೇವಲ ವರ್ಷಕ್ಕೆ ಒಂದುದಿನ ಆಚರಿಸುವ ಔಪಚಾರಿಕತೆಗೆ ಸೀಮಿತವಾಗದಿರಲಿ ಎಂದುಕೊಳ್ಳುತ್ತೇನೆ. ಎಷ್ಟು ಹೊತ್ತೂಂತ ನಿಮ್ಮನ್ನೆಲ್ಲಾ ನನ್ನ ಗಾಡೀಲೇ ಕೂರಿಸಿಕೊಳ್ಳಲಿ. ಇಲ್ಲೇ ಇಳಿಸಿಬಿಡುತ್ತೇನೆ. [ೆಲ್ಲೊಡಾಗಿದ್ದೆ ಬೆಲ್ಲ ಿಗಲ್ಲೆಯನ್ನಾದೂ ತೋರಿಸು ಎಂಬುದು ನಮ್ಮೂರ್ವಾದೆ, ಅದಕ್ಕೆಲ್ಲನ್ನಂತೂ ಕೊಡಿಲ್ಲೆಲ್ಲಿಗುವಾರಿ ತೋರಿಸೋಣ ಅಂತ.]ಹಾಂ...ಹಾಂ.. ಹೊರಡುವ ಮೊದಲು ಕೆ.ಎಸ್.ನರಸಿಂಹ ಸ್ವಾಮಿಯವರ ಚಂದದ ಒಂದು ನಾಡಭಕ್ತಿ ಗೀತೆಯನ್ನು ಕೇಳಲು ದಾರಿ ತೋರಿಸಿಬಿಡುತ್ತೇನೆ, ತಗೊಳಿ ಇಲ್ಲಿದೆ:

http://www.kannadaaudio.com/Songs/Patriotic/home/YerisiHarisiKannadadaBavuta.php

ಇಲ್ಲಿಗೆ ಹೋಗಿ, ’ಪಡುವಣ ಕಡಲಿನ’[ಯಾದಿಯಲ್ಲಿ ಮೂರನೇ ಹಾಡು] ಎನ್ನುವ ಹೆಸರಿನ ಕರ್ನಾಟಕ ಗೀತೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ, ಆನಂದಿಸಿ, ರಮ್ಯ-ಮನೋಹರ ಕನ್ನಡ ಹಾಡು.



             ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.