ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, September 9, 2012

ಈ ಭಾವದ ಅಭಾವ ಉಂಟಾದರೆ ವ್ಯಕ್ತಿ ನಿಜವಾಗಿ ಮಹಾನುಭಾವ

ಚಿತ್ರಋಣ: ಅಂತರ್ಜಾಲ 
ಈ ಭಾವದ ಅಭಾವ ಉಂಟಾದರೆ ವ್ಯಕ್ತಿ ನಿಜವಾಗಿ ಮಹಾನುಭಾವ


ಅದೊಂದು ತುಂಬಿದಮನೆ. ಸುಮಾರು ೧೨-೧೩ ಮಂದಿ ಇದ್ದರು ಆ  ಮನೆಯಲ್ಲಿ. ಒಂದೇ ತಂದೆ-ತಾಯಿಗೆ ನಾಲ್ವರು ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳು. ನಿತ್ಯವೂ ಉಂಡುಟ್ಟು ಸುಖವಾಗಿದ್ದರು. ಮನೆಯ ಹೆಣ್ಣುಮಕ್ಕಳ ಮದುವೆ ಬಹಳ ವಿಜೃಂಭಣೆಯಿಂದ ನಡೆಯಿತು. ವರ್ಷದ ಕಳೆದು ಗಂಡುಮಕ್ಕಳಲ್ಲಿ ಹಿರಿಯಣ್ಣನಿಗೆ ಮದುವೆಯಾಯ್ತು. ಮತ್ತೆ ವರ್ಷವೆರಡು ಕಳೆದು ಮಗುವೊಂದು ಜನಿಸಿತು. ಆ ಮಗು ಜನಿಸಿದ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ. ಯಾಕೆಂದರೆ ಅನೇಕ ವರ್ಷಗಳ ನಂತರ ಮನೆಯಲ್ಲೊಂದು ಪುಟ್ಟ ಮಗು! ಅಯೋಧ್ಯೆಯಲ್ಲಿ ರಾಮಜನ್ಮೋತ್ಸವ ನಡೆದಷ್ಟು ಸಂತಸ ಆ ಮನೆಯಲ್ಲಿತ್ತು. ಹುಟ್ಟಿದ ಹನ್ನೊಂದನೇ ದಿನಕ್ಕೆ ತೊಟ್ಟಿಲುತುಂಬಿದರು-ನಾಮಕರಣ ಮಾಡಿದರು; ಹೆಸರು ಶ್ರೀರಾಮ. ಶ್ರೀರಾಮನೆಂದರೆ ಆ ಇಡೀ ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು; ಆತನಿಗೆ ನಿದ್ದೆಮಾಡಲೇ ಕೊಡಲೊಲ್ಲರು. ಚಿಕ್ಕಪ್ಪಂದಿರು-ಅಜ್ಜ-ಅಜ್ಜ ಅಮೇಲೆ ಅಪ್ಪ-ಅಮ್ಮ ಎಲ್ಲರ ಹೃದಯಕದ್ದ ಚೋರ ಆ ಶ್ರೀರಾಮ! ದಿನ ಸಲ್ಲುತ್ತಲೇ ಇತ್ತು. ಮಗು ಅಂಬೆಗಾಲಿಕ್ಕುವಾಗ ಆಟಿಕೆಗಳೂ ಹೊಸ ಹೊಸ ಬಟ್ಟೆಗಳೂ ಬಂದವು. ಇನ್ನೂ ಒಂದು ವರ್ಷಕಳೆದಾಗ ಚಾಕಲೇಟುಗಳು ಬಂದವು. ಮಗುವಿನ ಕಿಲಕಿಲ ನಗುವಿನ ಅಗಲದ ಮೊಗದಲ್ಲಿ ಬಿಗುಮಾನಬಿಟ್ಟು ಮಕ್ಕಳಂತೇ ಆಡುತ್ತಿದ್ದರು ಆ ಮನೆಯ ಹಿರಿಯರು. ಮಗು ಬಿದಿಗೆಯ ಚಂದ್ರಮನಂತೇ ಬೆಳೆಯಿತು. ಪ್ರೀತಿಯ ಆ ಸರೋವರದಲ್ಲಿ ಮಿಂದ ಆ ಮಗುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನ ಅಜ್ಜ-ಅಜ್ಜಿ, ಚಿಕ್ಕಪ್ಪಂದಿರನ್ನೂ ಬಹಳ ಹಚ್ಚಿಕೊಂಡಿತ್ತು ಆ ಮಗು. ನಿಧಾನವಾಗಿ ನಡೆಯಲಾರಂಭಿಸಿದ ಮಗುವಿಗೆ ಚಿಕ್ಕಪ್ಪಂದಿರೆಲ್ಲಾ ಸೇರಿ ಬಣ್ಣದ ಸೈಕಲ್ ತಂದರು. ಅದರಲ್ಲಿ ಕೂರಿಸಿ ಅದನ್ನು ಓಡಿಸಲು ಕಲಿಸಿದರು.

ಇನ್ನೂ ಒಂದು ವರ್ಷ ಕಳೆಯುವಷ್ಟರಲ್ಲಿ ಮನೆಯ ಯಜಮಾನರು ತನ್ನ ಮಧ್ಯದ ಇಬ್ಬರು ಗಂಡುಮಕ್ಕಳಿಗೆ ಮದುವೆ ಮಾಡಿದರು.ಆ ಮನೆಗೆ ಹೊಸ ಸೊಸೆಯರಿಬ್ಬರ ಸೇರ್ಪಡೆಯಾಯ್ತು. ಹೊಸ ಹೊಸ ನೆಂಟರುಗಳು ಬರತೊಡಗಿದರು. ಮಗು ಬೆಳೆದು ಶಾಲೆಗೆ ಹೋಗಲಾರಂಭಿಸಿತು. ಮನೆಯಲ್ಲಿ ಚಿಕ್ಕಪ್ಪಂದಿರು ಕಥೆ ಪುಸ್ತಕಗಳನ್ನೂ ಚಾಕಲೇಟ್, ಬಿಸ್ಕಿಟ್ ಎಲ್ಲವನ್ನೂ ತಂದುಕೊಡುತ್ತಿದ್ದರು. ಮತ್ತೆ ವರ್ಷವೊಂದು ಹೀಗೆ ಕಳೆಯಿತು. ಚಿಕ್ಕಪ್ಪ-ಚಿಕ್ಕಮ್ಮಂದಿರಿಗೆ ಮಕ್ಕಳು ಜನಿಸಿದವು. ಇಬ್ಬರೂ ಹೆಣ್ಣುಮಕ್ಕಳು. ಶ್ರೀರಾಮನಿಗೆ ತಂಗ್ಯಮ್ಮಗಳು ಹುಟ್ಟಿದ ಸಡಗರ. ಮತ್ತೆ ಮನೆಯಲ್ಲಿ ಒಂಥರಾ ವಿಜಯೋತ್ಸವದ ವಾತಾವರಣ. ಕಾಲ ಸಂದಿತು ಈ ಮೊಮ್ಮಕ್ಕಳು ಬೆಳೆದರು. ಒಂದು ದಿನ ಒಬ್ಬ ಚಿಕ್ಕಪ್ಪ ಎಲ್ಲಿಂದಲೋ ಮಲ್ಲಿಗೆಯ ದಂದೆಯೊಂದನ್ನು ತಂದ. ತಂದ ಒಂದೇ ದಂಡೆಯನ್ನು ತನ್ನ ಮಗಳಿಗೆ ಮುಡಿಸಿದ. ಇನ್ನೊಬ್ಬ ಚಿಕ್ಕಪ್ಪನ ಮಗಳು ಅದನ್ನು ನೋಡಿ ತನಗೂ ಬೇಕೆಂದು ಹಠಮಾಡಿದಳು. ದಂಡೆಯನ್ನು ತಂದಿದ್ದ ಚಿಕ್ಕಪ್ಪ ತನ್ನ ಮಗಳಿಗೆ ಸಮಾಧಾನ ಹೇಳಿ ಅದನ್ನು ತನ್ನ ಮಗಳಿಂದ ಹಿಂಪಡೆದುಕೊಂಡು ಇನ್ನೊಬ್ಬ ಚಿಕ್ಕಪ್ಪನ ಹಠಮಾಡುತ್ತಿರುವ ಮಗಳಿಗೆ ಕೊಟ್ಟ. ತನ್ನ ಮಗು ರಂಪಾಟಮಾಡಿತು. ಕೆನ್ನೆಗೆ ಒಂದು ಜೋರಾಗಿ ಬಾರಿಸಿದ. ಮಗು ಅತ್ತು ಅತ್ತು ಸುಸ್ತಾಗಿ ಕೋಣೆಯ ಮೂಲೆಯಲ್ಲಿ ಮಲಗಿಬಿಟ್ಟಿತು. ಅದಕ್ಕೆ ಚಂದದ ಆ ದಂಡೆ ತನ್ನದು ಎಂಬ ಭಾವನೆ. ದಂಡೆ ಚೆನ್ನಾಗಿರುವುದು ಒಂದೇ ದಿನ, ನಾಳೆ ಹೂವುಗಳು ಮುದುಡಿ, ಒಣಗಿಯೋ ಕೊಳೆತೋ ಹಾಳಾಗಿ ಹೋಗುತ್ತದೆ ಎಂಬುದು ಆಕೆಗಿನ್ನೂ ಅರಿವಿಲ್ಲ. ವರ್ಷ ಕಳೆದು ಕೊನೆಯ ಚಿಕ್ಕಪ್ಪನಿಗೂ ಮದುವೆಯಾಯ್ತು. ಶ್ರೀರಾಮ ಆಗಿನ್ನೂ ಎರಡನೇ ತರಗತಿಗೆ ಕಾಲಿಟ್ಟಿದ್ದ. ವರ್ಷಕಳೆಯುವುದರೊಳಗೆ ಆ ಚಿಕ್ಕಪ್ಪನಿಗೂ ಮಗುವಾಯ್ತು. ಹುಟ್ಟಿದ ಗಂಡುಮಗುವಿಗೆ ಅಜ್ಜ-ಅಜ್ಜಿ ಲಕ್ಷ್ಮಣ ಎಂದು ನಾಮಕರಣ ಮಾಡಿದರು. 

ಒಂದು ದಿನ ಪುಟ್ಟ ಶ್ರೀರಾಮ ಶಾಲೆಗೆ ಹೋದವನು ಮರಳಿ ಮನೆಗೆ ಬರುವುದರೊಳಗೆ ಮನೆಯಲ್ಲಿ ಎಲ್ಲರೂ ಕೋಪದಿಂದ ಕಿತ್ತಾಡುತ್ತಿದ್ದರು! ಅಂತಹ ಸನ್ನಿವೇಶಗಳನ್ನು ನೋಡಿ-ಅನುಭವಿಸಿರದ ಮಗುವಿಗೆ ಬಹಳ ಬೇಸರವಾಯ್ತು. ಆದರೂ ಮಕ್ಕಳೆಲ್ಲಾ ಹೊರಗೆ ಆಟವಾಡಿದರು. ದಿನಗಳೆದಂತೇ ಮನೆಯಲ್ಲಿ ಜಗಳಗಳು ಆಗತೊಡಗಿದವು. ಚಿಕ್ಕಪ್ಪಂದಿರು ಶ್ರೀರಾಮನನ್ನು ಜಾಸ್ತಿ ಮಾತನಾಡಿಸುತ್ತಲೇ ಇರಲಿಲ್ಲ. ಮುದ್ದುಮಾಡುವುದನ್ನೂ ನಿಲ್ಲಿಸಿಬಿಟ್ಟಿದ್ದರು. ಪೇಟೆಯಿಂದ ಚಾಕೋಲೇಟ್ ತಂದುಕೊಡದೇ ಅದೆಷ್ಟೋ ತಿಂಗಳುಗಳೇ ಆಗಿಬಿಟ್ಟಿದ್ದವು. ಅಚ್ಚುಮೆಚ್ಚಿನ ಕಥೆ ಪುಸ್ತಕಗಳನ್ನು ತರುತ್ತಿರಲಿಲ್ಲ; ತಂದರೂ ಎಲ್ಲೋ ಅಡಗಿಸಿ ಇಟ್ಟುಕೊಳ್ಳುತ್ತಿದ್ದರು ಎಂಬುದು ಒಮ್ಮೆ ಹಾಗೆ ದೂರದಿಂದ ಕಂಡಾಗ ತಿಳಿಯಿತು. ಶ್ರೀರಾಮನಿಗೆ ಏನೂ ತಿಳಿಯುತ್ತಿರಲಿಲ್ಲ. ಅಮ್ಮನನ್ನು ಒಮ್ಮೆ ಕೇಳಿದಾಗ ಗದರಿಸಿ ಸುಮ್ಮನಾಗಿಸಿಬಿಟ್ಟಿದ್ದರು. ಅಜ್ಜ-ಅಜ್ಜಿಯ ಪ್ರೀತಿ ಹಂಚಿಹೋಗಿತ್ತಾದರೂ ಮನೆಯಲ್ಲಿ ಕಥೆ ಹೇಳುವವರು, ಮಕ್ಕಳನ್ನು ಜಾಸ್ತಿ ಮಾತನಾಡಿಸುವವರು ಅವರೇ ಆಗಿದ್ದರು.

ವರ್ಷಕಳೆಯಿತು. ಒಂದುದಿನ ಮನೆಯಲ್ಲಿ ಕೋಲಾಹಲ. ತನಗೆ ಭಾಗಕೊಟ್ಟು ಬಿಡಿ ತನಗೆ ಭಾಗ ಕೊಟ್ಟುಬಿಡಿ ಎಂಬ ಹೇಳಿಕೆ. ಅಪ್ಪ ಸುಮ್ಮನಿದ್ದ. ಚಿಕ್ಕಪ್ಪಂದಿರು ಅಜ್ಜನಲ್ಲಿ ಜಗಳಕಾಯುತ್ತಿದ್ದರು. ಶ್ರೀರಾಮನಿಗೆ ಬಹಳ ಬೇಜಾರಾಯ್ತು. ಈ ದೊಡ್ಡವರು ಅದ್ಯಾಕೆ ಜಗಳಕಾಯ್ತಾರೆ? ಮೊದಲು ಎಷ್ಟೆಲ್ಲಾ ಸಂತೋಷದಿಂದ ಇರ್ತಾ ಇದ್ರಲ್ಲಾ, ಎಂಬುದೊಂದೇ ಶ್ರೀರಾಮನೊಳಗಿನ ಭಾವನೆ. ಇನ್ನೊಂದು ದಿನ ಶಾಲೆಯಿಂದ ಮನೆಗೆ ಬಂದಿದ್ದಾನೆ, ಮನೆಯಲ್ಲಿ ಚಿಕ್ಕಪ್ಪಂದಿರು ಇರಲೇ ಇಲ್ಲ, ಚಿಕ್ಕಮ್ಮಂದಿರು, ತಮ್ಮ-ತಂಗಿಯರು ಯಾರೂ ಕಾಣಲಿಲ್ಲ. ಮತ್ತೆ ಅಮ್ಮನಲ್ಲಿ ಕೇಳಿದ "ಅಮ್ಮಾ,  ಮತ್ತೆ...ಮತ್ತೆ....ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು, ತಮ್ಮ-ತಂಗಿಯರು ಯಾರೂ ಇಲ್ವಲ್ಲಮ್ಮಾ  ಎಲ್ಲಿಗೆ ಹೋದರು?" ಮತ್ತೆ ಅಮ್ಮ " ಸುಮ್ನೇ ಕೂತ್ಕೊಳೋ" ಎಂದು ಕೆನ್ನೆಗೆ ಬಾರಿಸಿದಳು. ಶ್ರೀರಾಮ ಆ ರಾತ್ರಿಯೆಲ್ಲಾ ಚಿಂತಾಕ್ರಾಂತನಾಗಿದ್ದ; ತನ್ನವರೇ ಆಗಿದ್ದ ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು ತಮ್ಮ ಮಕ್ಕಳ ಜೊತೆ ಅದೆಲ್ಲಿಗೆ ಹೋದರು? ಇಡೀ ರಾತ್ರಿ ಹಾಸಿಗೆಯಲ್ಲಿ ಹೊರಳಾಟ, ಮನದೊಳಗೇ ನರಳಾಟ. ಯಾರಲ್ಲೂ ಕೇಳಲಾರ, ಯಾರಲ್ಲೂ ತನಗೇನಾಗುತ್ತಿದೆ  ಅಂತ ಹೇಳಲಾರ ! ಅಂತೂ ಬೆಳಗಾಯ್ತು, ಅಜ್ಜ-ಅಜ್ಜಿ ಬೆಳಿಗ್ಗೆಯ ಕಾಪಿ-ತಿಂಡಿ ಶಾಸ್ತ್ರಕ್ಕೆ ಮುಗಿಸಿದ್ದರು. ಇಬ್ಬರೂ ಪರಸ್ಪರ ಅದೇನೋ ಸಣ್ಣಗೆ ಮಾತಾಡಿಕೊಂಡು ಕಿರಿದಾದ ಕಣ್ಣುಗಳ ಕೊನೆಯಿಂದ ಕಣ್ಣೀರು ಹರಿಸುತ್ತಿದ್ದರು. ಶ್ರೀರಾಮ ನೋಡಿದ, ಮಾತನಾಡಿಸುವ ಧೈರ್ಯವಿರಲಿಲ್ಲ. ಅಯ್ಯೋ ತನ್ನ ಮನೆಯಲ್ಲಿ ಇದೇನಾಗುತ್ತಿದೆ ಎಂಬುದೇ ಶ್ರೀರಾಮನಿಗೆ ಅರ್ಥವಾಗುತ್ತಿರಲಿಲ್ಲ. ಅಮ್ಮ ಎರಡು ದಿನಗಳ ನಂತರ ಹೇಳಿದಳು" ಶ್ರೀರಾಮ ಇನ್ನು ಚಿಕ್ಕಪ್ಪಂದಿರು-ಚಿಕ್ಕಮ್ಮಂದಿರು ನಮ್ಮ ಜೊತೆ ಇಲ್ಲಿ ಇರುವುದಿಲ್ಲಾ, ಅವರು ಆಸ್ತಿಯಲ್ಲಿ ಹಿಸ್ಸೆ ಪಡೆದುಕೊಂಡು ಬೇರೇ ಬೇರೆ ಮನೆಗಳನ್ನು ಮಾಡಿಕೊಂಡಿದ್ದಾರೆ. ಅಜ್ಜ-ಅಜ್ಜಿ ಕೂಡ ಮೂರು ಮೂರು ತಿಂಗಳು ಒಂದೊಂದು ಮನೆಯಲ್ಲಿ ಇರುತ್ತಾರೆ. ಗೊತ್ತಾಯ್ತಾ. ನಾಳೆ ಅಜ್ಜ-ಅಜ್ಜಿ ಜಗದೀಶ್ ಚಿಕ್ಕಪ್ಪನ ಮನೆಗೆ ಹೋಗ್ತಾರೆ,ಹಾಗೇ ಮೂರು ಮೂರು ತಿಂಗಳಿಗೆ  ಅಲ್ಲಿಂದ ಇನ್ನೆರಡು ಚಿಕ್ಕಪ್ಪಂದಿರ ಮನೆಗೆ ಹೋಗಿ ೯ ತಿಂಗಳು ಬಿಟ್ಟು ಮತ್ತೆ ನಮ್ಮನೆಗೆ ಬರ್ತಾರೆ.ಇದೆಲ್ಲಾ ನಿಂಗರ್ಥವಾಗೊಲ್ಲ. ಮತ್ತೆ ಕೇಳುತ್ತಾ ಇರಬೇಡ, ಸುಮ್ನೇ ನಿನ್ನ ಶಾಲೆಯ ಕೆಲಸಗಳನ್ನು ಮಾಡಿಕೋ" 

ಶ್ರೀರಾಮನಿಗೆ ನಿಜಕ್ಕೂ ಅರ್ಥವೇ ಆಗಲಿಲ್ಲ. ತನ್ನ ಜನ ತನಗೆ ದೊರೆಯುತ್ತಿಲ್ಲವಲ್ಲಾ ಎಂಬುದಷ್ಟೇ ಅತನ ಕೊರಗು. ಅಜ್ಜ ರಾಮಾಯಣದ ಕಥೆಯನ್ನು ದಶರಥನ ಪುತ್ರಕಾಮೇಷ್ಠಿ ಯಾಗದ ವರೆಗೆ ಹೇಳಿ ಮುಗಿಸಿದ್ದ; ಇನ್ನೂ ಹೇಳುವವನಿದ್ದ. ಶ್ರೀರಾಮ ಅಜ್ಜನಲ್ಲಿಗೆ ಹೋಗಿ ಕೇಳಿದ "ಅಜ್ಜಾ ಅಜ್ಜಾ ರಾಮಾಯಣದ ಕಥೆಯನ್ನು ಮುಂದುವರಿಸೋಣವೇ?"  "ಇನ್ನೆಲ್ಲಿ ರಾಮಾಯಣ ಮಗನೇ? ಅಜ್ಜನ ಹಣೆಬರಹದಲ್ಲಿ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಮತ್ತೊಂದೆಡೆಗೆ ಹೀಗೇ ಹೋಗಬೇಕಾಯ್ತಲ್ಲಾ. ನಿನ್ನಂತಹ ನಾಲ್ವರು ಮುದ್ದು ಮೊಮ್ಮಕ್ಕಳನ್ನು ಒಟ್ಟಿಗೇ ಒಂದೆಡೆ ನಿತ್ಯವೂ ನೋಡುವ, ಆಟವಾಡುವ ಭಾಗ್ಯ ನನಗಿಲ್ಲ ಕಂದಾ.. ಮತ್ತೆ ಆದಾಗ ಹೇಳ್ತೀನಿ ಕಣೋ ಬೇಜಾರು ಮಾಡ್ಕೋಬೇಡ ಆಯ್ತಾ?" ಎನ್ನುತ್ತಾ ಗೋಳೋ ಎಂದು ಅತ್ತುಬಿಟ್ಟರು. ಅವರ ಜೊತೆ ಮಗು ಶ್ರೀರಾಮನೂ ಜೋರಾಗಿ ಅತ್ತ. ಆ ಸಂಜೆ ಅಜ್ಜ-ಅಜ್ಜಿ ಚಿಕ್ಕಪ್ಪನ ಮನೆಗೆ ಹೊರಟು ನಿಂತಾಗ ಚಿಕ್ಕಪ್ಪ ಕರೆದೊಯ್ಯಲು ಬಂದು  ದೂರ ನಿಂತಿದ್ದ. ತನ್ನನ್ನು ಮಾತೂ ಆಡಿಸಲಿಲ್ಲ. ತಾನು ಚಿಕ್ಕವನಿರುವಾಗ ಅಷ್ಟೆಲ್ಲಾ ಪ್ರೀತಿಸಿದ್ದ, ಚಾಕೋಲೇಟು, ಬಿಸ್ಕತ್ತು, ಕೀಲಿಕೊಟ್ಟು ಓಡಿಸೋ ಬೊಂಬೆ ಎಲ್ಲಾ ತಂದುಕೊಟ್ಟಿದ್ದ ಈ ಚಿಕ್ಕಪ್ಪ ಇವತ್ಯಾಕೆ ಹೀಗೆ? ಅರ್ಥವಾಗಲೇ ಇಲ್ಲ.  ಚಿಕ್ಕಪ್ಪನ ಹತ್ತಿರ ಹೋಗಿ ಕೈ ಹಿಡಿದು" ಚಿಕ್ಕಪ್ಪಾ" ಎಂದ. ಚಿಕ್ಕಪ್ಪ ಮಾತನಾಡಲೇ ಇಲ್ಲ! ಮತ್ತೆ ಕರೆದ ಮತ್ತೆ ಮತ್ತೆ ಕರೆದ, ಚಿಕ್ಕಪ್ಪ ಮಾತನಾಡಲೇ ಇಲ್ಲ. ಹೀಗೆ ತುಂಬಿದ ಮನೆಯೊಂದು ಒಡೆದಿತ್ತು, ಮನಗಳೂ ಒಡೆದುಹೋಗಿದ್ದವು; ಮಗುವಿಗೆ ಅದರ ಅರಿವಿರಲಿಲ್ಲ. ಮಗುವಿನ ಮನದಲ್ಲಿ ಮಾತ್ರ ಮನೆಯ ಎಲ್ಲಾ ಸದಸ್ಯರಲ್ಲೂ ಅದೇ ಪ್ರೀತಿ; ನಿಷ್ಕಲ್ಮಶ ಪ್ರೀತಿ.

ಮುದ್ದಾಡಿದ್ದ ಮಗುವನ್ನೇ ಒಮ್ಮೆ ಕಣ್ತೆರೆದು ಪ್ರೀತಿಯಿಂದ ಮಾತನಾಡಿಸಲಾರದಷ್ಟು ಕೋಪ ಆ ಚಿಕ್ಕಪ್ಪನಲ್ಲಿತ್ತು. ಮುದ್ದಾಡಿದ್ದ ಆ ಚಿಕ್ಕಪ್ಪನನ್ನು ಬಿಟ್ಟಿರಲಾರದ ತನ್ನ ಚಿಕ್ಕಪ್ಪನೆಂಬ ಭಾವ ಮತ್ತು ಪ್ರೀತಿ ಮಗುವಿನಲ್ಲಿತ್ತು. ಮಗುವಿಗೆ ಇನ್ನೇನೂ ಬೇಡ; ಪ್ರೀತಿಯಿದ್ದರೆ ಸಾಕು, ತನ್ನವರು ತನ್ನ ಸುತ್ತ ಇದ್ದರೆ ಸಾಕು. ಆದರೆ ಆ ತನ್ನವರೇ ಇಂದು ತನ್ನಿಂದ ದೂರವಾಗಿದ್ದಾರೆ ಎಂಬುದು ಮಗುವಿಗೆ ತಿಳಿಯುತ್ತಿರಲಿಲ್ಲ. ಅಮ್ಮ ಅಧಿಕಾರದಿಂದ ಅಸಡ್ಡೆಯಿಂದ ಹೇಳಿದ್ದು ಸಂಪೂರ್ಣ ಅರ್ಥವಾಗಿರಲಿಲ್ಲ. ಇಂತಹ ಮುಗ್ಧ, ನಿಶ್ಕಲ್ಮಶ ಮನ ಎಲ್ಲರಲ್ಲೂ ಇದ್ದರೆ ಇವತ್ತು ಈ ದೇಶ ಈ ರಾಜ್ಯ ಈ ಲೋಕ ಈ ರೀತಿ ಇರುತ್ತಿರಲಿಲ್ಲ. ಎಲ್ಲರೂ ತಮ್ಮವರೇ, ಯಾರೂ ಪರಕೀಯರಲ್ಲಾ ಎಂಬ ಭಾವ ಹುಟ್ಟಿದ್ದರೆ ಜನರ ಮನಸ್ಸು ಈ ರೀತಿ ಇರುತ್ತಿರಲಿಲ್ಲ.

ಗೀತೆ ಹೇಳುತ್ತದೆ, ಹಿಂದೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ, ಮುಂದೆ ಇನ್ಯಾರದ್ದೋ ಆಗಲಿದೆ. ಅನೇಕಾವರ್ತಿ ಕುಳಿತು ಯೋಚಿಸಿದ್ದೇನೆ: ಈ ಭೂಮಿಯ ಹಲವು ಭಾಗಗಳಿಗಾಗಿ ಸಾಮ್ರಾಜ್ಯಕ್ಕಾಗಿ ಅದೆಷ್ಟೋ ಜನ ರಾಜ-ಮಹಾರಾಜರುಗಳು ಕಿತ್ತಾಡಿದರು, ಘನಘೋರ ಯುದ್ಧಮಾಡಿದರು; ಕೆಲವ್ರು ಗೆದ್ದರು, ಇನ್ನು ಕೆಲವರು ಸೋತರು. ಇವತ್ತು ಗೆದ್ದವರೂ ಇಲ್ಲ ..ಸೋತವರೂ ಇಲ್ಲ. ಒಬ್ಬ ಗೆದ್ದ ರಾಜ್ಯ ಕೆಲಕಾಲ ಆತನ ಆಳ್ವಿಕೆಗೆ ಒಳಪಟ್ಟಿತು, ಆತನ ನಂತರ ಅದೆಷ್ಟೋ ಕೈಗಳು ಬದಲಾಗಿ ಹೋದ ದಾಖಲೆ ಇತಿಹಾಸದಲ್ಲಿ ಕಾಣುತ್ತದೆ. ಇವತ್ತು ನಮ್ಮದಾಗಿರುವ ಸ್ಥಿರಾಸ್ತಿ ಹಿಂದೆ ಇನ್ಯಾರದೋ ಆಗಿತ್ತು, ಮುಂದೆ ನಮ್ಮ ಮಕ್ಕಳು ಬಳಸಬಹುದು ಬಳಸದೇ ಮಾರಲೂ ಬಹುದು, ಹಿಂದೆ ನಮ್ಮ ಪೂರ್ವಜರು ತೊಟ್ಟಿದ್ದ ಬಂಗಾರದ ಸರ ಇಂದು ನಮಗೆ ದಕ್ಕಿತು, ನಾಳೆ ಇದನ್ನೇ ನಮ್ಮ ಮಕ್ಕಳು ಧರಿಸುತ್ತಾರೆ ಎಂಬುದು ಹೇಳಲುಬರುವ ವಿಷಯವಲ್ಲ, ಇಲ್ಲಿಂದ ಹೊರಡುವಾಗ ನಾವಂತೂ ಕೊಂಡುಹೋಗಲು ಸಾಧ್ಯವಿಲ್ಲ. ಅಂದಾಗ ಗೀತೆ ಹೇಳಿದ್ದು ಸರಿಯಾಗೇ ಇದೆ ಎಂಬುದು ಅರ್ಥವಾಗುತ್ತದಲ್ಲಾ?  ಯಾವುದೋ ತತ್ವಕ್ಕಾಗಿ, ಯಾವುದೋ ಮೌಲ್ಯಕ್ಕಾಗಿ ಪರಸ್ಪರ ವಾದಿಸುತ್ತೇವೆ-ಕಿತ್ತಾಡುತ್ತೇವೆ, ಎಲ್ಲಾ ತತ್ವಗಳಿಗೂ ಮಿಗಿಲಾದ ಸನಾತನ ನಿಸರ್ಗ ತತ್ವ ದೊಡ್ಡದು, ಅದನ್ನು ಹಿಂದೆ ಯಾರೋ ಅನುಭವಿಸಿದ್ದರು, ಇಂದು ನಾವು ಅನುಭವಿಸುತ್ತೇವೆ ಮತ್ತು ಮುಂದೆ ಬೇರೇ ಯಾರೋ ಅನುಭವಿಸುತ್ತಾರೆ.

ಕಿತ್ತಾಟಗಳಲ್ಲಿ ನಾವು ಬೈದುಕೊಳ್ಳುವಾಗ, ಆಡಿಕೊಳ್ಳುವಾಗ, ಹೀಯಾಳಿಸುವಾಗ, ಟೀಕಿಸುವಾಗ ನಮಗೆ ಅದು ಹಾಗನಿಸುವುದಿಲ್ಲ, ಬೈದನಂತರ, ಹಿಯಾಳಿಸಿದ ನಂತರ, ಟೀಕೆಮಾಡಿದ ನಂತರ ಈ ಎಲ್ಲದರ ಪಶ್ಚಾತ್ ಮನದಲ್ಲಿ ನಮಗೆ ನಾವೇ ಅನುಭವಿಸುವ ನೋವು ಅದು ಅಸಹ್ಯವಾದದ್ದು. ಪ್ರಚಂಡ ಚಂಡಮಾರುತ ಬೀಸಿದ ನಂತರದ ಭೂಭಾಗದ ಹಾಗೇ ಅದು, ಸುನಾಮಿ ಬಂದು ಕೊಚ್ಚಿಕೊಂಡು ಹೋದ ನಂತರದ ಕರಾವಳೀ ತೀರದ ಜನಜೀವನ ಅದು, ಸಿಡಿಲು ಬಡಿದು ಸುಟ್ಟಿಹೋದ ಮರಗಿಡಗಳ ತಾಣವದು.  ಛೆ ಹೀಗೆ ಮಾಡಬಾರದಿತ್ತು, ಹೀಗೆ ಮಾಡಿಬಿಟ್ಟೆವಲ್ಲಾ, ಯಾರಾದರೂ ಏನಾದರೂ ಮಾಡಿಕೊಳ್ಳಲಿ, ಎಲ್ಲರೂ ನಮ್ಮ ಕುಟುಂಬದವರೇ, ನಮ ಭಾರತೀಯರೇ, ನಮ್ಮ ಸನಾತನಿಗಳೇ ಎಂಬ ಭಾವ ಇರಬಾರದಿತ್ತೇ ಎನಿಸುತ್ತದೆ. ಭಾರತವೇ ಒಂದು ಕುಟುಂಬವಾದರೆ ಅದರಲ್ಲಿ ಹಲವು ಮತಗಳಿವೆ. ಅವು ಭಾರತಾಂಬೆಯ ಮಕ್ಕಳು. ಆ ಮತಗಳ ಒಳಪಂಗಡಗಳು, ಪಂಥಗಳು ಎಲ್ಲಾ ಆ ಕುಟುಂಬದ ಸದಸ್ಯರು. ಸದಸ್ಯರು ಸುಮನಸ್ಕರಾದರೆ ಈ ರೀತಿಯ ಹೊಯ್ದಾಟಗಳು ಇರುವುದಿಲ್ಲ. ಹೊಯ್ದಾಟವಿದ್ದರೆ ಸಂತೋಷಕ್ಕೆ ಅವಕಾಶವಿರುವುದಿಲ್ಲ, ನೆಮ್ಮದಿ ಇರುವುದಿಲ್ಲ. ಬಾಲಕರ ಆ ಮುಗ್ಧ ಭಾವ ನಮ್ಮೊಳಗೆ ಸದಾ ಇದ್ದರೆ ಬೇರೇ ಭಾವಗಳು ಬರಲು ಅಲ್ಲಿ ಅವಕಾಶವಿರುವುದಿಲ್ಲ. ಆ ಮುಗ್ಧ ಮತ್ತು ನಿಷ್ಕಳಂಕ ಪ್ರೀತಿ ಇಡೀ ಕುಟುಂಬವನ್ನು ಗಟ್ಟಿಯಾಗಿಸುತ್ತದೆ, ಇಡೀ ಕುಟುಂಬದ ಪ್ರೀತಿ ಎಲ್ಲರಿಗೂ ಸಿಗುತ್ತದೆ. 

ಭಗವಾನ್ ಶ್ರೀಧರ ಸ್ವಾಮಿಗಳು ಆಗಿನ್ನೂ ಸಾಧುವಾಗಿದ್ದರು, ಸನ್ಯಾಸ ದೀಕ್ಷೆ ಸ್ವೀಕಾರ ಆಗಿರಲಿಲ್ಲ. ಆ ಕಾಲದಲ್ಲಿ ಎಳೆಯ ವಯಸ್ಸು ಬೇರೆ. ಧಾರವಾಡ ಪೇಡಾ ಎಂದರೆ ಶ್ರೀಧರರಿಗೆ ಬಹಳ ಪ್ರೀತಿಯಾಗಿತ್ತು. ಪ್ರೀತಿ ಎಷ್ಟಪ್ಪಾ ಎಂದರೆ ಒಂದು ದಿನವೂ ಪೇಡೆ ನೆನಪಿಲ್ಲದೇ ಇರುತ್ತಲೇ ಇರಲಿಲ್ಲ. ಸದಾ ಪೇಡೆಗಾಗಿ ಹಂಬಲಿಸುವ ಮನಸ್ಸು. ಚಿಕ್ಕಮಕ್ಕಳು ಅರಿಯದ ವಯಸ್ಸಿನಲ್ಲಿ ಯಾವುದೋ ಆಟಿಕೆಯನ್ನೋ ಮತ್ತಿನ್ನೇನನ್ನೋ ಕೊಡಿಸು ಎನ್ನುವಹಾಗೇ, ಸ್ವತಃ ಶ್ರೀಧರರ  ಮನಸ್ಸೇ  ಶ್ರೀಧರರಿಗೆ  ಹಾಗೆ ಕಂಡಿತು. 'ಹಠಮಾಡ್ತೀಯಾ ಇರು ನಿನಗೆ' ಎನ್ನುತ್ತಾ ಒಂದು ದಿನ ಸ್ವಲ್ಪ ಪೇಡಾ ತಂದರು, ಪೇಡಾಗಳನ್ನು ತುಂಡುಮಾಡಿಕೊಂಡು ಅವುಗಳಿಗೆ ದನದ ತಾಜಾ ಸಗಣಿ ಮಿಶ್ರಣಮಾಡಿದರು. ಉಂಡೆಮಾಡಿ ಬಲವಂತದಿಂದ ಒಂದಷ್ಟು ತಿಂದರು. ಕೆಲವೇ ಕ್ಷಣ ತಿಂದಿದ್ದೆಲ್ಲಾ ವಾಂತಿಯಾಯ್ತು! ಅಂದಿನಿಂದ ಪೇಡೆ ನೋಡಿದರೇ ಅಸಹ್ಯವಾಗಿ ಅವರು ಪೇಡಾ ತಿನ್ನುವುದನ್ನೇ ಬಿಟ್ಟುಬಿಟ್ಟರು.   ಚಿತ್ತವೃತ್ತಿಯನ್ನು ನಿಗ್ರಹಿಸುವುದಕ್ಕೆ ಉದಾಹರಣೆ ಇದಾಗಿದೆ. 

ಮೇಲಿನ ಕಥೆಯನ್ನು ಸುಖಾಂತ್ಯಗೊಳಿಸುವಂತೇ ನನ್ನ ಹೃದಯ ಕೋರಿದ್ದರಿಂದ ಕಥೆಯ ಮುಂದಿನಭಾಗ ಹೀಗಿದೆ: ದೂರದ ಊರಿಂದ ಶ್ರೀಗಳೊಬ್ಬರು ಬಂದರು. ಬಹಳ ತಪಸ್ಸಿದ್ಧಿಯನ್ನು ಪಡೆದವರು. ಒಡೆದಮನೆಯ ಎಲ್ಲಾ ಸದಸ್ಯರೂ ಅವರಿಗೆ ಪರಿಚಿತರು. ಮನೆಯ ಮುಪ್ಪಿನ ಯಜಮಾನ ಮತ್ತು ಆತನ ಹೆಂಡತಿ ಬಹಳ ಭಕ್ತರು; ಸಂತ ಬಂದ ಸುದ್ದಿ ಕೇಳಿ ದರ್ಶನ ಮಾಡಲು ನಡೆದರು.  ದೇವಸ್ಥಾನದ ಅರಳೀಕಟ್ಟೆಯ ಕೆಳಗೆ ಸಂತ ಕುಳಿತಿದ್ದರು. ಸಾಷ್ಟಾಂಗ ವಂದನೆಗೈದ ಅಜ್ಜ-ಅಜ್ಜಿ ಸಂತರ ಮುಂದೆ ಕಣ್ಣೀರು ಹರಿಸಿದರು. ಸಂತರು ಅವರನ್ನು ಸಂತೈಸಿದರು. ಮಾರನೇ ದಿನ ಮನೆಯ ಎಲ್ಲರನ್ನೂ ಕರೆದು ಒಗ್ಗಟ್ಟಿನ ಮಹತ್ವವನ್ನೂ ಕೂಡಿ ಬಾಳಿದರೆ ಇರುವ ಸುಖವನ್ನೂ ಅರುಹಿದರು, ಚಿಕ್ಕ-ಪುಟ್ಟ ನ್ಯೂನತೆಗಳಿದ್ದರೂ ಕೂಡಿಬಾಳುವುದೇ ಸರ್ವಸುಖವೆಂದೂ, ಮುಪ್ಪಿನ ತಂದೆ-ತಾಯಿಗಳಿಗೆ ತ್ರಾಸು ಕೊಡಬೇಡಿರೆಂದು ಹೇಳಿದರು. ತನ್ನ ಮಾತಿನಂತೇ ನಡೆದರೆ ನಿಮಗೆ ಒಳ್ಳೆಯದಾಗುತ್ತದೆ ಎಂದರು. ಅದಾದ ಕೆಲವೇ ಗಂಟೆಗಳಲ್ಲಿ ಒಡೆದ ಮನೆಯಿಂದ ತೆಗೆದುಕೊಂಡು ಹೋದ ಸಾಮಾನುಗಳು ಮರಳಿ ವಾಪಸು ಬಂದವು. ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು, ತಮ್ಮ-ತಂಗಿಯರು ಎಲ್ಲರೂ ಮರಳಿ ಮನೆಗೆ ಬಂದರು. ತಮ್ಮಲ್ಲಿರುವ ನ್ಯೂನತೆಗಳಿಗೆ ಗುರು ಸೂಚಿಸಿದ ಪರಿಹಾರವನ್ನು ನಡೆಸಿದರು, ಪರಸ್ಪರ ಅಗಲಿರಲಾರದ ಆತ್ಮೀಯ ಅನುಬಂಧವನ್ನು ಅನುಭವಿಸಿದರು; ಶ್ರೀರಾಮನ ನಾಯಕತ್ವದಲ್ಲಿ ಮನೆಯ ಮಕ್ಕಳೆಲ್ಲಾ ಸೇರಿ ಗಣೇಶ ಹಬ್ಬವನ್ನು ಆಚರಿಸಿದರು. ಅಜ್ಜ ಮೊಮ್ಮಕ್ಕಳಿಗೆ ರಾಮಾಯಣ ಕಥೆಯನ್ನು ಮುಂದುವರಿಸಿದ.

ಏನಾಗಬೇಕೋ ಅದು ಆಗುತ್ತಲೇ ಇರುವುದು ನಿಸರ್ಗಧರ್ಮ,ಪ್ರಕೃತಿ ಧರ್ಮ. ನಾವು ಸ್ವಚ್ಛಗೊಳಿಸಲು ಮುಂದಾದರೂ ಮತ್ತೆ ಅದು ಕೊಳೆಯಾಗಬಹುದು, ಕೊಳೆಯಾಗಿದ್ದು ತಂತಾನೇ ಸ್ವಚ್ಛವಾಗಲೂ ಬಹುದು. ನಮ್ಮ ಮನವನ್ನು ನಾವು ಸ್ವಚ್ಛವಾಗಿ ನಿರ್ಮಲವಾಗಿ, ಪ್ರಶಾಂತವಾಗಿ ಇಡಲು ಪ್ರಯತ್ನಿಸಿದರೆ ಆಗ ಪ್ರಕೃತಿ ತಂತಾನೇ ಸ್ವಚ್ಛಗೊಳ್ಳುತ್ತದೆ ಯಾಕೆಂದರೆ ಮನೆಯ ಸದಸ್ಯರು ಮಗು ಓಡಾಡುವ ಜಾಗದಲ್ಲಿ ಸ್ವಚ್ಛತೆ ಕಾಪಾಡುತ್ತಾರೆ. ಅಂತಹ ಮಗುವಿನಂತಹ ಮನಸ್ಸು ನಮ್ಮದಾಗಲಿ. ನಮಗೆ ಯಾವ ಗೋಜೂ ಬೇಡ, ಗೋಜಲೂಬೇಡ, ಕುಟುಂಬದಲ್ಲಿ ಸಹಜಪ್ರಾಪ್ತವಾಗುವ ಸಂತೋಷವೇ ಸಾಕು. ಬಲಿತ ಭಾವನೆಗಳು ಎಂದರೆ ಅರಿಷಡ್ವರ್ಗಗಳು, ಅವು ರೆಕ್ಕೆಬಲಿತ ಹಕ್ಕಿಯಂತೇ ಹಾರಾಡುತ್ತವೆ, ರಕ್ಕಸತನವನ್ನು ಮೆರೆಯುತ್ತವೆ. ಕ್ಷಣಮಾತ್ರ ಅವುಗಳಲ್ಲೊಂದು ಮನದಲ್ಲಿ ನರ್ತಿಸಿದರೂ ಬುದ್ಧಿಯ ತಾಳ ತಪ್ಪುತ್ತದೆ, ಅಂತಹ ಭಾವಗಳ ಅಭಾವ ಉಂಟಾದಾಗ ವ್ಯಕ್ತಿ ಮಹಾನುಭಾವನಾಗಲು ಸಾಧ್ಯ. ಅಂತಹ ಭಾವಗಳ ಅಭಾವ ನಮ್ಮಲ್ಲಿ ಉಂಟಾಗಲಿ, ನಿರ್ಮಲಭಾವ ಸಾತ್ವಿಕ ಭಾವ ನಮ್ಮಲ್ಲಿ ಸದಾ ನೆಲೆಸಿ ಮಗುವಿನ ನಗುವಿನಂತಹ ನಗು ಮೊಗದಲ್ಲಿ ನೆಲೆಸಲಿ ಎಂಬದೇ ಜಗನ್ನಿಯಾಮಕ ಶಕ್ತಿಯಲ್ಲಿ ಇಂದಿನ ಪ್ರಾರ್ಥನೆಯಾಗಿದೆ.