ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 18, 2010

ಭೂರಮೆಯ ಭೂರಿಯೂಟ

ಮನಸ್ಸು ಬಾಡಿದಾಗ, ನೋವಿಗೀಡಾದಾಗ, ಕೋಪಗೊಂಡಾಗ,ಪರಿತಾಪ ಪಡುವಾಗ, ನಿಶ್ಚೇಷ್ಟಿತವಾದಾಗ, ದುಃಖಿತವಾದಾಗ, ತಾಳ್ಮೆ ಕಳೆದುಕೊಂಡಾಗ, ಸೈರಣೆ ಇಲ್ಲದಾದಾಗ, ಅಸಹನೆ ಜಾಸ್ತಿಯಾದಾಗ, ವೈರುಧ್ಯ ತುಂಬಿಕೊಂಡಾಗ, ಗೊಂದಲದ ಗೂಡಾದಾಗ, ದಾರಿಯೇ ಕಾಣದಾದಾಗ, ಮಸುಕು ಮಸುಕಾಗಿ ಕುಂತಾಗ, ತಲೆಗೇನೂ ತೋಚದಾದಾಗ, ದ್ವೇಷ ಭುಗಿಲೆದ್ದಾಗ, ಅವಮಾನಿತವಾದಾಗ, ಏನೋ ಕಳೆದುಹೋದ ಸ್ಥಿತಿ ಅನುಭವಿಸುವಾಗ, ಪ್ರೀತಿಪಾತ್ರರನ್ನು ಕಳಕೊಂಡ ಹಸಿಹಸಿ ಬಿಟ್ಟಿರಲಾರದ ತುಡಿತಕ್ಕೊಳಗಾದಾಗ. ಸಂಪ್ಪತ್ತು ಕಳ್ಳತನದಲ್ಲಿ ಕಳೆದು ಹೋದಾಗ -- ಎಲ್ಲಾ ಹೊತ್ತಿನಲ್ಲೂ ನಮ್ಮನ್ನು ತನ್ನ ಮಕ್ಕಳೆಂದು ಅತೀ ಪ್ರೀತಿಯಿಂದ ನೋಡುವುದು ನಿಸರ್ಗ-ಭೂತಾಯಿ-ಭೂರಮೆ ಮಾತ್ರ!

ನಾವು ಏನೇ ಕೊಡಲಿ, ಕೊಡದಿರಲಿ, ಭೂಮಿಯನ್ನು , ಅದರ ನೇರ ಮಕ್ಕಳಾದ ಗಿಡಮರಗಳನ್ನು ಕಡಿದು-ಕತ್ತರಿಸಿದರೂ, ಭೂಮಿಯನ್ನೇ ಅಗೆದರೂ, ಉತ್ತರೂ , ಬೀಜ ನೆಟ್ಟರೂ, ತಾರು ರಸ್ತೆ ನಿರ್ಮಿಸಿದರೂ, ಬಂಗಲೆ -ಮಹಲುಗಳನ್ನು ಕಟ್ಟಿದರೂ, ದೇವಸ್ಥಾನ-ಮಸೀದಿ-ಚರ್ಚು-ಗುರುದ್ವಾರ ಹರಿದ್ವಾರಗಳೆಂದು ಬಡಿದಾಡಿದರೂ ಪ್ರಕೃತಿ ಮಾತೆ ಸದಾ ನಿರ್ವಿಣ್ಣ, ನಿರಪೇಕ್ಷಿತ ಅಲ್ಲವೇ ? ನಮ್ಮಿಂದ ಏನನ್ನೂ ಬಯಸದೇ ನಮಗೆ ಎಲ್ಲವನ್ನೂ ಕೊಡುವ ನಿಸರ್ಗಮಾತೆಯ ಋಣ ತೀರಿಸಲು ನಮ್ಮಿಂದ ಸಾಧ್ಯವೇ ? ಅದು ಎಂದಿದ್ದರೂ ಕನಸಿನ ಮಾತೇ ಸರಿ !

ಏನೇ ನೋವುಕೊಡಲಿ ಅದನ್ನೆಲ್ಲಾ ನಲಿವಿನಿಂದ ಸ್ವೀಕರಿಸಿ, ಬಡವ-ಬಲ್ಲಿದ, ಜಾತಿ-ಮತಗಳ ಭೇದ ಇಲ್ಲದೇ ಏಕರೂಪವಾಗಿ ಮತ್ತು ಅದೇ ಪ್ರೀತಿಯಿಂದ ನೋಡುವುದು ಈ ಭೂರಮೆ. ನಮ್ಮಿಂದ ಏನೊಂದನ್ನೂ ಬಯಸದೇ, ತನ್ನಷ್ಟಕ್ಕೇ ತಾನಿದ್ದು ಪರೋಪಕಾರಿಯಾಗಿ ಕಣ್ಣಿಗೆ ಕಾಣುವ ಪ್ರಪಂಚದ ಪಂಚ ಭೂತಗಳಲ್ಲಿ
ಒಂದಾದ ಈ ಭೂರಮೆಯನ್ನು ಎಷ್ಟೇ ಕೊಂಡಾಡಿದರೂ ಅದು ನಮ್ಮ ಖುಷಿಗಷ್ಟೇ ಹೊರತು ನಮ್ಮಿಂದ ಹೊಗಳಿಕೆ ಬಂದಿಲ್ಲ ಎಂದು ಭೂರಮೆ ಎಂದೂ strike ಮಾಡುವುದಿಲ್ಲ, ಎಂದೂ ಧರಣಿ ನಡೆಸುವುದಿಲ್ಲ. ಸ್ವತಃ ಅವಳೇ ಧರಿತ್ರಿ-ಧರಣಿ ! ಇಂತಹ ಭೂತಾಯ ನಿಸರ್ಗದ ಮಡಿಲಲ್ಲಿ ಮುಂಜಾನೆ ಒಮ್ಮೆ ಹೀಗೇ round ಹೋಗಿಬನ್ನಿ, ಕೇವಲ ಕೇವಲ ಅರ್ಧ ಗಂಟೆ ಸಾಕು ! ನಿಮ್ಮಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಅಲ್ಲಿದೆ ಉತ್ತರ, ಅದು ಪೇಯಗಳಿಂದ, ಆಲ್ಕೊಹಾಲಿನಿಂದ, ಮಾದಕ ವ್ಯಸನಗಳಿಂದ,ಗುಟ್ಕಾ-ತಂಬಾಕಿನ ಚಟಗಳಿಂದ ಬರಲಾರದ-ಸಿಗಲಾರದ ಅದಮ್ಯ solution. Solution for all your needs ! ಮನುಷ್ಯನ ಅತೀ ಕೊನೆಯ ಆಸೆ ಅಂದರೆ ಮನಸ್ಸು ತೃಪ್ತಿಯಿಂದ-ಸಂತೋಷದಿಂದ-ನೆಮ್ಮದಿಯಿಂದ ಇರುವುದು. ಎಷ್ಟಿದ್ದರೇನು ಅದನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲವಲ್ಲ ? ಹೀಗಾಗಿ ನಿಸರ್ಗದ ಮಡಿಲಲ್ಲಿ ಸಹಜವಾಗಿ ಆ ಅಮ್ಮ ಕೊಡುವ ಪ್ರೀತಿ ತಕ್ಕ ಮಟ್ಟಿಗೆ ಸಿಗುತ್ತದೆ. ಅದು ಪರೋಕ್ಷ, ಅದು ಸ್ಫೂರ್ತಿ, ಅದು ಚೈತನ್ಯ, ಅದು ನೂರಾನೆ ಬಲ, ಅದು ಸ್ಥೈರ್ಯ , ಅದು instant recharge. ನಮ್ಮನ್ನೇ ಮರೆತು ಸುಮ್ಮನೇ ಏನೂ ಮಾತಾಡದೆ ಹೋಗಿ ತಿರುಗಾಡಿ ಒಮ್ಮೆ ಪ್ರಯತ್ನಿಸಿ ನೋಡಿ. ಅದನ್ನು ನೋಡಿಯೇ ಬರೆದ ಕವನ ನಿಮಗಾಗಿ -



[ಚಿತ್ರ ಋಣ: ಅಂತರ್ಜಾಲ]

ಭೂರಮೆಯ ಭೂರಿಯೂಟ

ಮಂಜಮುಂಜಾವದಲಿ ಹೀಗೊಮ್ಮೆ ನಲಿಯಿತದು ಮನಸು
ರಂಜನೆಯೇ ಅದಕಾಯ್ತು ನಸುನಗುತಿರಲೊಮ್ಮೆ ಬಲು ಸೊಗಸು

ಸುಮ್ಮ ಸುಮ್ಮನೇ ನಾ ನಡೆಯುತುದ್ಯಾನದಲಿ
ನಲಿವೆ ಗಿಡಮರಗಳ ಕಂಡು
ಹೆಮ್ಮೆಯಾತಕೋ ಮನದಿ ಭಿಮ್ಮನೇ ಬೀಗುವೆ
ಅವುಗಳ ಸಿರಿವಂತಿಕೆಯನುಂಡು

ಬಾಳಬಾಂದಳದಲ್ಲಿ ಮುನ್ನೋಟ ಬೀರುತ್ತ ಪ್ರಕೃತಿಯ
ಬಿಟ್ಟಿರಲು ನನಗದಸಾಧ್ಯ
ಆಳಅಗಲಗಳ ಅಳೆಯಲದು ವಿಸ್ತಾರ ವಿಸ್ತಾರ
ಸಾಗರದಾದಿಯ ನೈವೇದ್ಯ !

ನೀರವ ಮೌನದ ನಡುವೆ ನೂರೆಂಟು ಹಕ್ಕಿಗಳ
ಪ್ರೀತಿಯ ಕಲರವದಿಂಚರವೂ
ಅರ್ಣವನೋಡೋಡಿ ಮೇಲೆದ್ದು ಬರಲಾಗ ಅಹಹಾ
ನನ್ನಲಿ ಮಿಂಚಿನ ಸಂಚಾರವೂ

ಜಾರಿಬಿದ್ದರೂ ಖುಷಿಯೇ ಮೇಲಕೆದ್ದರೂ ಹಿತವೇ
ಭೂರಮೆಯ ಭೂರಿಯೂಟ ನೆನೆದು
ವಾರದುದ್ದಕೂ ದಿನವೂ ವಿಶ್ರಮಿಸೆ ನನಗಾಯ್ತು
ಗುನುಗುನುಗುನಿಸುತಾ ನಲಿದು

ಹಸಿರು ಕೆಂಪು ಹಳದಿ ನೀಲಿ ಬಿಳಿ ತಿಳಿಹಸಿರು
ಒಂದೆರಡೇ ಬಣ್ಣಗಳಾ ಚಿತ್ತಾರ ?
ಉಸಿರು ಜೀವನಕೆ ಗಳಿಗೆ ಗಂಟೆ ನಿಮಿಷವದಾಗಿ
ಸಣ್ಣಗಾಗಿ ನಲ್ಮೆಯ ಸಾಕಾರ !